ಸೀರೆ ಕಳ್ಳ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.23- ರಾತ್ರಿ ಕನ್ನಕಳವು ಮಾಡಿದ ಆರೋಪಿಯೊಬ್ಬನನ್ನು ಉತ್ತರ ವಿಭಾಗದ ಯಶವಂತಪುರ ಠಾಣೆ ಪೊಲೀಸರು ಬಂಧಿಸಿ 12 ಲಕ್ಷ ರೂ. ಬೆಲೆಯ ರೇಷ್ಮೆ ಸೀರೆಗಳನ್ನು ವಶಪಡಿಕೊಂಡಿದ್ದಾರೆ. ಚಿಕ್ಕಬಾಮವಾರ ಸಂಧ್ಯಾನಗರದ ರವಿಪ್ರಕಾಶ್ (62) ಬಂಧಿತ ವ್ಯಕ್ತಿ. ಈತನಿಂದ 67 ರೇಷ್ಮೆ ಸೀರೆ, ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ವಶಪಡಿಸಿಕೊಂಡಿದ್ದಾರೆ.

ಯಶವಂತಪುರ ಒಂದನೇ ಮುಖ್ಯರಸ್ತೆಯಲ್ಲಿರುವ ವಿನೂತನ ಸಿಲ್ಕ್ ಅಂಗಡಿಯಲ್ಲಿ ನರೇಶ್‍ಕುಮಾರ್ ಎಂಬುವವರು ಸೆ. 8 ರಂದು ರಾತ್ರಿ 8 ಗಂಟೆಗೆ ವ್ಯಾಪಾರ ಮುಗಿಸಿ ಬೀಗ ಹಾಕಿಕೊಂಡು ಹೋಗಿದ್ದರು. ಮಾರನೆ ದಿನ ಬೆಳಗ್ಗೆ 11 ಗಂಟೆಗೆ ನರೇಶ್‍ಕುಮಾರ್ ಅಂಗಡಿ ಬಾಗಿಲು ತೆರೆಯಲು ಬಂದಾಗ ಕಟ್ಟಡದ ಸೈಡ್ ಪ್ಯಾಸೇಜ್ ಗೇಟ್ ತೆರೆದಿರುವುದು ಕಂಡು ಬಂದಿದೆ.

ತಕ್ಷಣ ಅಂಗಡಿ ಬೀಗ ತೆಗೆದು ಒಳಗೆ ಹೋಗಿ ನೋಡಿದಾಗ ಕಳ್ಳರು ಅಂಗಡಿಯ ಕಿಟಕಿ ಗ್ರಿಲ್ಸ್ ಕತ್ತರಿಸಿ, 10 ಲಕ್ಷ ಬೆಲೆಯ ರೇಷ್ಮೆ ಸೀರೆಗಳು ಮತ್ತು 10 ಸಾವಿರ ಹಣ ಕಳ್ಳತನವಾಗಿರುವುದು ಕಂಡುಬಂದಿದೆ. ಈ ಬಗ್ಗೆ ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ರಾತ್ರಿ ಕನ್ನಕಳವು ಆರೋಪಿಯನ್ನು ಬಂಧಿಸಿ ರೇಷ್ಮೆ ಸೀರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ 30 ವರ್ಷಗಳ ಹಿಂದೆ ಗೋವಾದಲ್ಲಿ ಕಾಫಿ ಎಸ್ಟೇಟ್‍ನಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದು, ಹಣ ಸಾಕಾಗದೇ ಗೋವಾ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ರಾತ್ರಿ ವೇಳೆ ಬೀಗ ಹಾಕಿರುವ ಅಂಗಡಿಗಳ ಶಟರ್, ಕಿಟಕಿ ಗ್ರಿಲ್‍ಗಳನ್ನು ಮುರಿದು ಹಣ ಮತ್ತಿತರ ವಸ್ತುಗಳನ್ನು ಕಳವು ಮಾಡಿದ್ದು, ಸುಮಾರು 14 ಪ್ರಕರಣಗಳು ದಾಖಲಾಗಿರುತ್ತವೆ.

ಆಟೋ ಓಡಿಸುವಾಗ ವಿನೂತನ ಸಿಲ್ಕ್‍ನ ರೇಷ್ಮೆ ಸೀರೆ ಅಂಗಡಿ ನೋಡಿಕೊಂಡು ಈ ಕೃತ್ಯವೆಸಗಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳು ಭಾಗಿಯಾಗಿರುವುದು ಕಂಡುಬಂದಿದ್ದು,  ಸದ್ಯ ತಲೆಮರೆಸಿಕೊಂಡಿ ರುವವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

Facebook Comments