ನಿರ್ಮಾಣ ಕ್ಷೇತ್ರವನ್ನು ಕಾಡುತ್ತಿದೆ ಕಾರ್ಮಿಕರ ಕೊರತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 9- ಕೋವಿಡ್-19ನಿಂದಾಗಿ ದೇಶಾದ್ಯಂತ ಲಾಕ್‍ಡೌನ್ ಇದ್ದುದರಿಂದ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಕೆಲವು ನಿಯಮ ಸಡಿಲಿಸಿ ನಿರ್ಮಾಣ ಕ್ಷೇತ್ರ ಪ್ರಾರಂಭಕ್ಕೆ ಅನುಮತಿಯನ್ನು ನೀಡಿದೆ. ಆದರೆ, ಕಾರ್ಮಿಕರ ಕೊರತೆ ಎದ್ದು ಕಾಣುತ್ತಿದೆ.

ಬೇರೆ ರಾಜ್ಯಗಳು ಸೇರಿದಂತೆ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಂದ ವಲಸೆ ಕಾರ್ಮಿಕರು ತುತ್ತಿನ ಚೀಲ ತುಂಬಿಸಿಕೊಳ್ಳಲು ನಗರಕ್ಕೆ ಆಗಮಿಸಿ ಬದುಕು ಕಟ್ಟಿಕೊಂಡಿದ್ದರು. ಕೋವಿಡ್-19 ಮಹಾಮಾರಿ ಇಡೀ ವಿಶ್ವವನ್ನೇ ನಲುಗಿಸಿದೆ. ಹಾಗಾಗಿ ಎಲ್ಲ ಕ್ಷೇತ್ರಗಳೂ ಚಟುವಟಿಕೆ ಸ್ಥಗಿತಗೊಳಿಸಬೇಕಾಯಿತು. ನಿರ್ಮಾಣ ಕ್ಷೇತ್ರವೂ ಕಾರ್ಯವನ್ನು ಸಲ್ಲಿಸಿತು.

ಕೊರೊನಾ ತನ್ನ ಕರಾಳ ಹಸ್ತ ಚಾಚುತ್ತಲೇ ಇದೆ. ಇತ್ತ ಕಟ್ಟಡ ಕೆಲಸಗಳಲ್ಲಿ ತೊಡಗಿ ಜೀವನ ಕಂಡುಕೊಂಡಿದ್ದ ಸಾವಿರಾರು ಕಾರ್ಮಿಕರು ಕೆಲಸವಿಲ್ಲದೆ ಹೊತ್ತಿನ ಊಟಕ್ಕೂ ಪರಿತಪಿಸಿದರು. ಕೆಲವೆಡೆ ಸಂಸ್ಥೆಗಳು ತಮ್ಮಲ್ಲಿ ದುಡಿಯುವ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿದರೆ ಮತ್ತೆ ಕೆಲವರು ನಿರ್ಲಕ್ಷ್ಯ ವಹಿಸಿದರು. ಇದರಿಂದ ದಿಕ್ಕೆಟ್ಟ ವಲಸೆ ಕಾರ್ಮಿಕರು ಸ್ವಂತ ಊರುಗಳತ್ತ ಮುಖ ಮಾಡಿದರು.

ಸರ್ಕಾರವೂ ಅವರ ಇಚ್ಛೆಯನ್ನು ಮನಗಂಡು ರೈಲು ಹಾಗೂ ಬಸ್‍ಗಳ ಮೂಲಕ ಊರುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದೆ. ಇದು ಈಗಲೂ ಮುಂದುವರಿದಿದೆ. ಆದರೆ, ನಗರದಲ್ಲಿ ಬಹಳಷ್ಟು ಕಟ್ಟಡ ಕಾಮಗಾರಿಗಳು ಲಾಕ್‍ಡೌನ್‍ನಿಂದಾಗಿ ಅರ್ಧಕ್ಕೆ ನಿಂತಿವೆ. ಇತ್ತ ಕಾರ್ಮಿಕರು ಲಭ್ಯವಾಗದೆ ಬಹಳಷ್ಟು ಸಂಸ್ಥೆಗಳು ಕಾಮಗಾರಿ ಪೂರ್ಣಗೊಳಿಸಲಾಗದೆ ಪರಿತಪಿಸುವಂತಾಗಿದೆ.

ನಿರ್ಮಾಣ ಹಂತದ ಕಟ್ಟಡಗಳ ಬಳಿ ಸಣ್ಣಪುಟ್ಟ ಶೆಡ್‍ಗಳನ್ನು ಹಾಕಿಕೊಂಡು ವಾಸಿಸುತ್ತಿದ್ದ ಕಾರ್ಮಿಕರು ಊರುಗಳಿಗೆ ಹೋಗಿಬಿಟ್ಟಿದ್ದಾರೆ. ಹಾಗಾಗಿ ಶೆಡ್‍ಗಳು, ಗುಡಿಸಲುಗಳು ಬೀಗ ಹಾಕಿವೆ.

ನಗರದಲ್ಲೇ ನೆಲೆನಿಂತಿದ್ದ ಕೆಲವು ಕಾರ್ಮಿಕರು ಇನ್ನು ಇಲ್ಲೇ ಉಳಿದಿದ್ದಾರೆ. ಇಂತವರ ಮನವೊಲಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಕಾಮಗಾರಿಗಳಲ್ಲಿ ತೊಡಗಿಕೊಳ್ಳುವಂತೆ ಸರ್ಕಾರ ಮನವೊಲಿಸುತ್ತಿದೆ.

ಇಂತಹ ಕಾರ್ಮಿಕರು ಇತ್ತ ಮನಸ್ಸು ಮಾಡಿದರೆ ಸಣ್ಣಪುಟ್ಟ ಕಟ್ಟಡ ಕಾಮಗಾರಿಗಳು ಪ್ರಾರಂಭವಾಗಬಹುದು. ಆದರೆ, ಬೃಹತ್ ಕಾಮಗಾರಿಗಳು ಆರಂಭವಾಗಲು ಹೆಚ್ಚಿನ ಕಾರ್ಮಿಕರ ಅತ್ಯಗತ್ಯವಿದೆ. ಇದು ಅದ್ಯಾವಾಗ ಸಾಧ್ಯವಾಗುವುದೋ ಕಾದು ನೋಡಬೇಕಿದೆ.

Facebook Comments

Sri Raghav

Admin