ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಕೊಲೆ ಆರೋಪಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.24- ಬಂಧಿಸಲು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿಯೊಬ್ಬ ಗೋವಿಂದಪುರ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಮಹಮ್ಮದ್ ಸಲೀಂ (28) ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊಲೆ ಆರೋಪಿ.  ಕಳೆದ 21ರ ರಾತ್ರಿ ಈ ಆರೋಪಿ ಮತ್ತು ಆತನ ಸಹಚರರು ಸಯ್ಯದ್ ಕರೀಂ ಆಲಿ ಎಂಬುವವರನ್ನು ಅಪಹರಿಸಿಕೊಂಡು ಹೋಗಿ ಗೋವಿಂದಪುರದ ಶಾಂಪುರ ರೈಲ್ವೆ ಹಳಿ ಸಮೀಪದ ಖಾಲಿ ಜಾಗದಲ್ಲಿ ಕುತ್ತಿಗೆ ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಗೋವಿಂದಪುರ ಠಾಣೆ ಪೊಲೀಸರು ಕೊಲೆ ಆರೋಪಿಗಳ ಬಂಧನಕ್ಕಾಗಿ ಶೋಧ ನಡೆಸುತ್ತಿದ್ದರು. ಈ ನಡುವೆ ಆರೋಪಿ ಮಹಮ್ಮದ್ ಸಲೀಂ ಎಚ್‍ಬಿಆರ್ ಲೇಔಟ್‍ನ ಅರಣ್ಯ ಪ್ರದೇಶದಲ್ಲಿದ್ದಾನೆ ಎಂಬ ಖಚಿತ ಮಾಹಿತಿ ಗೋವಿಂದಪುರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಇಮ್ರಾನ್ ಮತ್ತು ಅವರ ತಂಡಕ್ಕೆ ಲಭಿಸಿದೆ.

ಇಂದು ಮುಂಜಾನೆ ಸುಮಾರು 4 ಗಂಟೆ ಸಮಯದಲ್ಲಿ ಈ ತಂಡ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಲು ಹೋದ ಕಾನ್ಸ್‍ಟೆಬಲ್ ಹಂಸ ಅವರ ಮೇಲೆ ಹಲ್ಲೆ ಮಾಡಿ ಮತ್ತೆ ದಾಳಿ ಮಾಡಲು ಮುಂದಾದ. ಆಗ ಸಬ್‍ಇನ್ಸ್‍ಪೆಕ್ಟರ್ ಇಮ್ರಾನ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದರು. ಆದರೂ ಸಹ ಮತ್ತೆ ದಾಳಿಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಅವರು ಹಾರಿಸಿದ ಗುಂಡು ಆತನ ಎಡಗಾಲಿಗೆ ತಗುಲಿ ಕುಸಿದು ಬಿದ್ದ.

ಸುತ್ತುವರಿದ ಪೊಲೀಸರು ಗಾಯಗೊಂಡಿರುವ ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡಿರುವ ಕಾನ್ಸ್‍ಟೆಬಲ್ ಅವರಿಗೂ ಸಹ ಚಿಕಿತ್ಸೆ ಕೊಡಿಸಲಾಗಿದೆ. ತಲೆಮರೆಸಿಕೊಂಡಿರುವ ಉಳಿದ ಕೊಲೆ ಆರೋಪಿಗಳಿಗಾಗಿ ಗೋವಿಂದಪುರ ಪೊಲೀಸರು ಬಲೆ ಬೀಸಿದ್ದಾರೆ.

Facebook Comments