ಪಕ್ಷಾಂತರಕ್ಕೆ ಅಡಿಪಾಯ ಹಾಕಿದ್ದೇ ಕುಮಾರಸ್ವಾಮಿ: ಶ್ರೀಪಾದ ರೇಣು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.29- ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಪಕ್ಷಾಂತರಕ್ಕೆ ನಾಂದಿ ಹಾಡಿದವರೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ವಕ್ತಾರ ಶ್ರೀಪಾದ ರೇಣು ಆರೋಪ ಮಾಡಿದ್ದಾರೆ.

ನಗರದಲ್ಲಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಈ ಹಿಂದೆ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸುಗಮವಾಗಿ ಆಡಳಿತ ನಡೆಸುತ್ತಿತ್ತು. ಆದರೆ,ಅಧಿಕಾರದ ಆಸೆಯಿಂದ ಆ ಸರ್ಕಾರವನ್ನೇ ಅಸ್ಥಿರಗೊಳಿಸಿ ಪತನವಾಗುವಂತೆಯೂ ಮಾಡಿದ ಕೀರ್ತಿ ಕುಮಾರಸ್ವಾಮಿಯವರಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.

ಧರ್ಮಸಿಂಗ್ ಸರ್ಕಾರ ಪತನವಾದ ನಂತರ ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡುವುದು ಬೇಡ ಎಂದು ಜೆಡಿಎಸ್ ತಾಕೀತು ಮಾಡಿದರೂ ಮತ್ತು ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಅವರು ಹೇಳಿದರೂ ಕೇಳದೇ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದ ಕುಮಾರಸ್ವಾಮಿಯವರೇ ಮೊದಲ ಅನರ್ಹ ಶಾಸಕರೆನಿಸಿಕೊಂಡಿದ್ದರು ಎಂದು ಶ್ರೀಪಾದ ರೇಣು ವಾಗ್ದಾಳಿ ನಡೆಸಿದರು.

Facebook Comments