ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದ ಶ್ರೇಯಸ್ ಅಯ್ಯರ್

ಈ ಸುದ್ದಿಯನ್ನು ಶೇರ್ ಮಾಡಿ

ಕಾನ್ಪುರ, ನ.26- ಕಿವೀಸ್‍ನ ಹಿರಿಯ ವೇಗಿ ಟೀಮ್ ಸೋಥಿ ಅವರ ಮಾರಕ ಬೌಲಿಂಗ್ (5 ವಿಕೆಟ್) ನಡುವೆಯೂ ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದ ಶ್ರೇಯಸ್ ಅಯ್ಯರ್‍ರ ರೋಚಕ ಆಟ (105 ರನ್, 13 ಬೌಂಡರಿ, 2ಸಿಕ್ಸರ್) ನೆರವನಿಂದ ಭಾರತ ಮೊದಲ ಇನ್ನಿಂಗ್ಸ್‍ನಲ್ಲಿ 345 ರನ್‍ಗಳಿಗೆ ಸರ್ವಪತನವಾಗಿದೆ.

ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡ 258 ರನ್ ಗಳಿಸಿದ್ದ ಭಾರತದ ಬ್ಯಾಟ್ಸ್‍ಮನ್‍ಗಳಾದ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರಾ ಜಾಡೇಜಾ ಅವರು ಇಂದು ಕೂಡ ಸೋಟಕ ಬ್ಯಾಟಿಂಗ್ ಮಾಡುವ ಮೂಲಕ ಬೃಹತ್ ಮೊತ್ತ ದಾಖಲಿಸುವತ್ತ ಚಿತ್ತ ಹರಿಸಿದ್ದರಾದರೂ ಈ ಜೋಡಿಗೆ ಸೋಥಿ ಬ್ರೇಕ್ ಹಾಕಿದರು.

ನಿನ್ನೆ ಅರ್ಧಶತಕ ಗಳಿಸಿದ್ದ ಅಲೌಂಡರ್ ರವೀಂದ್ರಾ ಜಾಡೇಜಾ ಇಂದು ತಮ್ಮ ಖಾತೆಗೆ ಒಂದು ರನ್ ಸೇರ್ಪಡೆ ಮಾಡದೆ ಟೀಮ್ ಸೋಥಿ ಬೌಲಿಂಗ್‍ನಲ್ಲಿ ಕ್ಲೀನ್ ಬೋಲ್ಡ್ ಆದರು. ನಂತರ ಬಂದ ವಿಕೆಟ್ ಕೀಪರ್ ವೃದ್ಧಿಮಾನ್ ಷಾ 1 ರನ್ ಗಳಿಸಿ ಸೋಥಿಗೆ ವಿಕೆಟ್ ಒಪ್ಪಿಸಿದರು.

ಅಶ್ವಿನ್ ಆರ್ಭಟ:  ವೇಗಿ ಟೀಮ್ ಸೋಥಿಯ ಬೌಲಿಂಗ್‍ನಲ್ಲಿ ಜಾಡೇಜಾ ಹಾಗೂ ಶಾ ವಿಕೆಟ್ ಒಪ್ಪಿಸಿದ ನಂತರ ಕ್ರೀಸ್‍ಗಿಳಿದ ರವಿಚಂದ್ರನ್ ಅಶ್ವಿನ್ ಅವರು ಶ್ರೇಯಸ್ ಅಯ್ಯರ್ ಜೊತೆಗೂಡಿ ಉತ್ತಮ ರನ್ ಗಳಿಸುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

ಈ ಜೋಡಿಯು 7 ವಿಕೆಟ್‍ಗೆ 17 ರನ್‍ಗಳ ಜೊತೆಯಾಟ ನೀಡಿದ್ದಾಗ ಶತಕ ಗಳಿಸಿದ್ದ ಅಯ್ಯರ್ ಸೋಥಿ ಬೌಲಿಂಗ್‍ನಲ್ಲಿ ಯಂಗ್‍ಗೆ ಕ್ಯಾಚ್ ನೀಡಿದರು.ಅಯ್ಯರ್ ಔಟಾದರೂ ತನ್ನ ನೈಜ ಆಟ ಪ್ರದರ್ಶಿಸಿದ ಅಶ್ವಿನ್ (38ರನ್, 5 ಬೌಂಡರಿ) ತಂಡದ ಮೊತ್ತವನ್ನು 300 ರನ್‍ಗಳ ಗಡಿ ದಾಟಿಸಿದರಾದರೂ ಅಜಾಜ್‍ಪಟೇಲ್ ಬೌಲಿಂಗ್‍ನಲ್ಲಿ ಔಟಾದರು. ಬಾಲಂಗೋಚಿ ಉಮೇಶ್‍ಯಾದವ್ 1 ಆಕರ್ಷಕ ಸಿಕ್ಸರ್ ಸಿಡಿಸಿ ಅಜೇಯ 10 ರನ್ ಗಳಿಸುವ ಮೂಲಕ ತಂಡವನ್ನು 345 ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾದರು.ನ್ಯೂಜಿಲ್ಯಾಂಡ್ ಪರ ಟೀಮ್ ಸೋಥಿ 5, ಕೇಲ್ ಜೆಮ್ಮಿಸನ್ 3, ಅಜಾಜ್ ಪಟೇಲ್ 2 ವಿಕೆಟ್ ಕಬಳಿಸಿದರು.

ಕಿವೀಸ್ ಉತ್ತಮ ಹೋರಾಟ:
ಭಾರತ ಮೊದಲ ಇನ್ನಿಂಗ್ಸ್‍ನಲ್ಲಿ 345 ರನ್‍ಗಳಿಗೆ ಸರ್ವಪತನ ಕಂಡ ನಂತರ ಕ್ರೀಸ್‍ಗೆ ಇಳಿದ ನ್ಯೂಜಿಲ್ಯಾಂಡ್‍ನ ಆರಂಭಿಕ ದಾಂಡಿಗರಾದ ಟೋಮ್ ಲಾಥಮ್ (10 ರನ್, 1 ಬೌಂಡರಿ) ಹಾಗೂ ವಿಲ್ ಯಂಗ್ (24 ರನ್‍ಸ 3 ಬೌಂಡರಿ) ಉತ್ತಮ ಹೋರಾಟ ನಡೆಸುತ್ತಿದ್ದು, ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ನ್ಯೂಜಲ್ಯಾಂಡ್ ಒಂದು ವಿಕೆಟ್ ಕೂಡ ಕಳೆದುಕೊಳ್ಳದೆ 17 ಓವರ್‍ಗಳಲ್ಲಿ 36 ರನ್‍ಗಳನ್ನು ಗಳಿಸಿತ್ತು.

#ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸಿದ ಭಾರತೀಯ ಆಟಗಾರರು
ಕಾನ್ಪುರ, ನ.26- ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲೇ ಭಾರತದ ಯುವ ಆಟಗಾರ ಶ್ರೇಯಸ್ ಗೋಪಾಲ್ ಪಾದಾರ್ಪಣೆ ಪಂದ್ಯದಲ್ಲೇ ಶತಕ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಶತಕ ಗಳಿಸಲು 157 ಎಸೆತಗಳನ್ನು ಕಳೆದುಕೊಂಡಿದ್ದಾರೆ, ಈ ರೀತಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಮೂರಂಕಿ ದಾಟಿದ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

* ಇಂಗ್ಲೆಂಡ್ ವಿರುದ್ದ 11 ಸೆಪ್ಟೆಂಬರ್ 1911ರಲ್ಲಿ ಇಂಗ್ಲೆಂಡ್ ವಿರುದ್ಧ ಲಾಡ್ರ್ಸ್ ಮೈದಾನದಲ್ಲಿ ಚೊಚ್ಚಲ ಪಂದ್ಯದಲ್ಲಿ ಲಾಲಾ ಅಮರನಾಥ್ 111 ರನ್ ಗಳಿಸಿದರು. ಅಮರನಾಥ್ ಗಳಿಸಿದ ಏಕೈಕ ಶತಕ ಇದಾಗಿದೆ.
* 12 ಡಿಸೆಂಬರ್ 1952ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ದೀಪಕ್ ಸೋಧಾನ್ 110 ರನ್ ಗಳಿಸಿದರು.
* 19 ನವೆಂಬರ್ 1955ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅಮೃತ್‍ಸರ್ ಗೋವಿಂದಸಿಂಗ್ ಕೃಪಾಲ್ ಸಿಂಗ್ ಅಜೇಯ 100 ರನ್ ಗಳಿಸಿದ್ದಾರೆ.
* 23 ಜುಲೈ 1959ರಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬಾಸ್ ಅಲಿ ಬೇಗ್ 112 ರನ್ ಬಾರಿಸಿದ್ದಾರೆ.
* 8 ಫೆಬ್ರವರಿ 1964ರಲ್ಲಿ ಹನುಮಂತ್‍ಸಿಂಗ್ ಇಂಗ್ಲೆಂಡ್ ವಿರುದ್ಧ 105 ರನ್ ಚೆಚ್ಚಿದ್ದರು.
* 15 ನವೆಂಬರ್ 1969ರಲ್ಲಿ ಚೊಚ್ಚಲ ಪಂದ್ಯ ಆಡಿದ ಗುಂಡಪ್ಪ ವಿಶ್ವನಾಥ್ ಆಸ್ಟ್ರೇಲಿಯಾ ವಿರುದ್ಧ ಶತಕ ಗಳಿಸಿದ್ದಾರೆ, ಇವರು ತಮ್ಮ ಟೆಸ್ಟ್ ಜೀವನದಲ್ಲಿ 14 ಶತಕ ಗಳಿಸಿದ್ದಾರೆ.
* ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಸುರೇಂದ್ರ ಅಮರನಾಥ್ ಅವರು 24 ಜನವರಿ 1976ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದು ಆ ಪಂದ್ಯದಲ್ಲಿ 124 ರನ್ ಬಾರಿಸಿದ್ದಾರೆ.
* ಭಾರತ ತಂಡದ ಶ್ರೇಷ್ಠ ನಾಯಕನಾಗಿದ್ದ ಮೊಹಮ್ಮದ್ ಅಜರುದ್ದೀನ್‍ಗೆ ಟೆಸ್ಟ್ ಗೆ ಪಾರ್ದಾಪಣೆ ಮಾಡಿದ31 ಡಿಸೆಂಬರ್ 1984ರಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಗಳಿಸುವ ಮೂಲಕ ಗಮನ ಸೆಳೆದಿದ್ದು, ಟೆಸ್ಟ್ ಜೀವನದಲ್ಲಿ 22 ಶತಕ ಗಳಿಸಿದ್ದಾರೆ.
* 13 ನವೆಂಬರ್ 1992ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದ ಪ್ರವೀಣ್ ಆಮ್ರೆ 103 ರನ್ ಬಾರಿಸಿದ್ದರು.
* ಭಾರತ ಕ್ರಿಕೆಟ್ ತಂಡದ ಉತ್ತಮ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು 20 ಜೂನ್ 1996ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿ ಚೊಚ್ಚಲ ಶತಕ ಬಾರಿಸಿದ್ದರು. ಗಂಗೂಲಿ ಒಟ್ಟು 16 ಶತಕ ಗಳಿಸಿದ್ದಾರೆ. ಗರಿಷ್ಠ 239 ರನ್.
* ಭಾರತದ ಪರ ಚೊಚ್ಚಲ ತ್ರಿಶತಕ ಗಳಿಸಿದ ಸೋಟಕ ಆಟಗಾರ ವೀರೇಂದ್ರ ಸೆಹ್ವಾಗ್ 3 ನವೆಂಬರ್ 2001ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯ ಆಡುವ ಮೂಲಕ ಮೂರಂಕಿ ದಾಟಿದ್ದರು. ಸೆಹ್ವಾಗ್ 23 ಶತಕ ಗಳಿಸಿದ್ದು, 319 ಗರಿಷ್ಠ ರನ್ ಆಗಿದೆ.
* ಭಾರತ ತಂಡದ ಮಧ್ಯಮ ಕ್ರಮಾಂಕ ಬ್ಯಾಟ್ಸ್‍ಮನ್ ಆಗಿದ್ದ ಸುರೇಶ್‍ರೈನಾ 26 ಜುಲೈ 2010 ರಂದು ಶ್ರೀಲಂಕಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 120 ರನ್ ಗಳಿಸುವ ಮೂಲಕ ಶತಕ ಬಾರಿಸಿದ್ದಾರೆ.
* ಗಬ್ಬರ್‍ಸಿಂಗ್ ಖ್ಯಾತಿಯ ಶಿಖರ್ ಧವನ್ 14 ಮಾರ್ಚ್ 2013ರಂದು ಆಸ್ಟ್ರೇಲಿಯಾ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯ ಆಡಿ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ್ದರು ಧವನ್ ಒಟ್ಟು 7 ಶತಕ ಗಳಿಸಿದ್ದು, 190 ರನ್ ಗರಿಷ್ಠ ಸ್ಕೋರ್ ಆಗಿದೆ.
* ಭಾರತದ ಚುಟುಕು ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದು ಅವರು 6 ನವೆಂಬರ್ 2013ರಂದು ವೆಸ್ಟ್‍ಇಂಡೀಸ್ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿ ಇದುವರೆಗೂ 8 ಶತಕ ಗಳಿಸಿದ್ದು 212 ಗರಿಷ್ಠ ರನ್ ಆಗಿದೆ.
* 4 ಅಕ್ಟೋಬರ್ 2018ರಂದು ವೆಸ್ಟ್‍ಇಂಡೀಸ್ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದ ಪೃಥ್ವಿ ಶಾ ಕೂಡ ತಮ್ಮ ಚೊಚ್ಚಲ ಪಂದ್ಯದಲ್ಲಿ 134 ರನ್ ಗಳಿಸುವ ಶತಕ ಬಾರಿಸಿದ್ದಾರೆ.

Facebook Comments