ಅಪಘಾತಕ್ಕೀಡಾಗಿದ್ದ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಆರೋಗ್ಯ ಸುಧಾರಣೆ
ಪಣಜಿ, ಜ.14- ಪತ್ನಿ ಮತ್ತು ಸಹಚರರೊಂದಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದು ಕಾರಿನಲ್ಲಿ ಹಿಂತಿರುಗುತ್ತಿದ್ದ ಕೇಂದ್ರ ಸಚಿವ ಶ್ರೀಪಾದ್ ನಾಯಕ್ (68) ಅವರ ಕಾರು ಅಂಕೋಲಾ ಬಳಿ ಅಪಘಾತಕ್ಕೀಡಾಗಿತ್ತು. ಸ್ಥಳದಲ್ಲೇ ಪತ್ನಿ ಹಾಗೂ ಸಹಚರನನ್ನು ಕಳೆದುಕೊಂಡು ತೀವ್ರ ಗಾಯಗಳಿಂದ ಅಸ್ವಸ್ಥರಾಗಿದ್ದ ಶ್ರೀಪಾದ್ ಅವರನ್ನು ಗೋವಾ ಮೆಡಿಕಲ್ ಕಾಲೇಜ್ (ಜಿಎಂಸಿಎಚ್) ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಯ ಹಿರಿಯ ವೈದ್ಯರು ಮಾತನಾಡಿ, ಸಚಿವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಸಚಿವರ ಉಸಿರಾಟ ಸಹಜ ಸ್ಥಿತಿಗೆ ಬಂದಿಲ್ಲವಾದ್ದರಿಂದ ಹೊರಗಿನಿಂದ ಎಚ್ಎಫ್ಎನ್ಸಿ ಮೂಲಕ ಅಮ್ಲಜನಕ ಪೂರೈಕೆ ಮಾಡಲಾಗುತ್ತಿದೆ.
ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಐಐಎಂಎಸ್) ತಂಡದೊಂದಿಗೆ ಜಂಟಿಯಾಗಿ ಜಿಎಂಸಿಎಚ್ ವೈದ್ಯರು ಸಚಿವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಸಚಿವರ ಆರೋಗ್ಯದಲ್ಲಿ ಬಹಳಷ್ಟು ಸುಧಾರಣೆ ಕಂಡುಬಂದಿದ್ದು, ಎಲ್ಲ ವೈದ್ಯಕೀಯ ಚಿಕಿತ್ಸೆಗಳಿಗೆ ಸ್ಪಂದಿಸುತ್ತಿದ್ದಾರೆ. ಶೀಘ್ರದಲ್ಲೇ ಚೇತರಿಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ ಎಂದು ಅವರು ತಿಳಿಸಿದ್ದಾರೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಪಾದ್ ನಾಯಕ್ ಅವರ ಆರೋಗ್ಯದ ಬಗ್ಗೆ ವೈದ್ಯರಲ್ಲಿ ಮಾಹಿತಿ ಪಡೆದರು. ನಾಯಕ್ ಅವರಿಗೆ ಪ್ರಜ್ಞಾ ಮರಳಿದ್ದು, ಆರೋಗ್ಯದಲ್ಲಿ ಚೇತರಿಕೆ ಪಡೆಯುತ್ತಿದ್ದಾರೆ ಎಂದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಜಿಎಂಸಿಎಚ್ ಆಸ್ಪತ್ರೆಗೆ ಇತ್ತೀಚೆಗೆ ಭೇಟಿ ನೀಡಿದ್ದರು.