`ಶುಭಂ’ ಪುಸ್ತಕ ಲೋಕಾರ್ಪಣೆ ವೇಳೆ ಪತ್ರಕರ್ತನಾಗಿದ್ದ ದಿನ ನೆನೆದ ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.28- ರಾಜಾಜಿನಗರದ 80 ಅಡಿ ರಸ್ತೆಯಲ್ಲಿ ಈ ವ್ಯಕ್ತಿಯನ್ನು ನಾನು ಕಂಡೆ… ಅವರು ಇಂದು ಸಿನಿಮಾದ ಶಬ್ದಕೋಶವೆಂದೇ ಬಿಂಬಿತವಾಗಿದ್ದಾರೆ… ಖ್ಯಾತ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಶುಭಂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮದೇ ಶೈಲಿಯಲ್ಲಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ತಮ್ಮ ಪತ್ರಕರ್ತರಾಗಿದ್ದ ಹಿಂದಿನ ದಿನವನ್ನು ನೆನೆದಿದ್ದು ಹೀಗೆ.

ಕರ್ನಾಟಕ ನ್ಯೂಸ್ ಪೇಪರ್ಸ್ ಅಸೋಸಿ ಯೇಷನ್ ವತಿಯಿಂದ ಬೆಂಗಳೂರು ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶುಭಂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಭಿಮಾನಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿ ದ್ದಾಗ ಗಣೇಶ್ ಕಾಸರಗೋಡು ಅವರು ನನಗೆ ಪರಿಚಯವಾಗಿದ್ದು, ನಾವು ಆಗ ಇದ್ದ ಪರಿಸ್ಥಿತಿಯನ್ನು ನೆನೆದರೆ ಈಗಲೂ ಕಣ್ಣುಗಳಲ್ಲಿ ನೀರು ಬರುತ್ತದೆ.

ನಮ್ಮ ಜೇಬಿನಲ್ಲಿ ಕೇವಲ 10ರೂ.ಗಳಿತ್ತು. ಈಗ ಇರುವ ಎಂಟಿಆರ್ ಮಾದರಿಯಲ್ಲಿ ಹತ್ತಿರದಲ್ಲೇ ಆರ್‍ಟಿಆರ್ (ರಾಜಾಜಿನಗರ ಟಿಫನ್ ರೂಮ್) ಹೊಟೇಲ್ ಇತ್ತು.ಅಲ್ಲಿ ನಮಗೆ ಸಾಲ ನೀಡುತ್ತಿದ್ದರು. ಆ ಪುಣ್ಯಾತ್ಮನನ್ನು ನಾವು ಮರೆಯುವುದಿಲ್ಲ. ನಾನು ಬೆಂಗಳೂರಿನಲ್ಲಿ ಇಷ್ಟರ ಮಟ್ಟಿಗೆ ಬೆಳೆದಿದ್ದೇನೆ ಎಂದರೆ ಅದಕ್ಕೆ ಗಣೇಶ್ ಕಾಸರಗೋಡು ಅವರ ಬೆಂಬಲವೂ ಕಾರಣ. ನಾನು ಕೂಡ ಪತ್ರಿಕೋದ್ಯಮದಲ್ಲಿ ಇವರ ಬಗ್ಗೆ ಪುಸ್ತಕ ಬರೆಯುತ್ತೇನೆ ಎಂದು ಹೇಳಿದರು.

ಪತ್ರಕರ್ತರ ಸಮಸ್ಯೆಗಳು ಏನೆಂಬುದನ್ನು ಅರಿತಿದ್ದೇನೆ. ಗಣೇಶ್ ಅವರು ಒಳ್ಳೆಯ ಪುಸ್ತಕವನ್ನೇ ನೀಡಿದ್ದಾರೆ. ಇದು ಎಲ್ಲರ ಕೈ ಸೇರಲಿ ಎಂದು ಆಶಿಸಿದರು. ಮೊದಲ ಪ್ರತಿಯನ್ನು ಖರೀದಿಸಿದ ನಟ ಸುದೀಪ್, ನಾನು ಹೆಚ್ಚಾಗಿ ಪುಸ್ತಕ ಓದುವುದಿಲ್ಲ. ಆದರೆ, ಈ ಶುಭಂ ಪುಸ್ತಕದ ಒಂದೆರಡು ಹಾಳೆ ತಿರುವಿ ನೋಡಿದರೆ ಗಣೇಶ್ ಅವರ ಪರಿಶ್ರಮ ಗೊತ್ತಾಗುತ್ತದೆ. ನಮ್ಮ ಸಿನಿಮಾದ ಭಂಡಾರವೇ ಇದರಲ್ಲಿ ಅಡಗಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ನಟಿ ತಾರಾ ಮಾತನಾಡಿ, ಸಿನಿಮಾ ಕ್ಷೇತ್ರ ವಿಸ್ತಾರವಾಗಿದೆ. ಅಲ್ಲಿನ ಹಲವಾರು ಏಳು ಬೀಳುಗಳ ಬಗ್ಗೆ ಸಂಕ್ಷಿಪ್ತವಾಗಿ ಪುಸ್ತಕದಲ್ಲಿದೆ. ಇದು ನಿಜಕ್ಕೂ ನಮ್ಮನ್ನು ಭಾವುಕರನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.

Facebook Comments