IND vs NZ 2021 ಶುಭಮನ್‍ಗಿಲ್ ಆಕರ್ಷಕ ಅರ್ಧಶತಕ ಆಸರೆಯಾದ ರಹಾನೆ, ಅಯ್ಯರ್

ಈ ಸುದ್ದಿಯನ್ನು ಶೇರ್ ಮಾಡಿ

ಕಾನ್ಪುರ, ನ.25- ವಿಶ್ವ ಟೆಸ್ಟ್ ಫೈನಲ್ ಪಂದ್ಯದ ನಂತರ ಇದೇ ಮೊದಲ ಬಾರಿಗೆ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಉತ್ತಮ ಹೋರಾಟ ಪ್ರದರ್ಶಿಸುತ್ತಿದೆ.

ನ್ಯೂಜಿಲ್ಯಾಂಡ್ ವಿಶ್ವ ಟೆಸ್ಟ್ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ವೇಗಿ ಕೇಲ್ ಜೆಮ್ಮಿಸನ್ ಅವರು ಇಂದಿನಿಂದ ಆರಂಭಗೊಂಡಿರುವ ಟೆಸ್ಟ್ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತದ ಆರಂಭಿಕ ಆಟಗಾರರಿಗೆ ಲಗಾಮು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಗಿಲ್ ಅರ್ಧಶತಕ:
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭಿಕ ಆಟಗಾರರಾದ ಕನ್ನಡಿಗ ಮಯಾಂಕ್ ಅಗರ್‍ವಾಲ್ ಹಾಗೂ ಶುಭಮನ್ ಗಿಲ್ ಜೋಡಿಯು ಆರಂಭದಿಂದಲೂ ಕಿವೀಸ್ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಿ ಬೌಂಡರಿಗಳ ಸುರಿಮಳೆ ಸುರಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರ ಮನ ರಂಜಿಸಿದರು.

ತಂಡದ ಮೊತ್ತ 21 ರನ್‍ಗಳಾಗುವಷ್ಟರಲಿ ವೇಗಿ ಕೇಲ್ ಜೆಮ್ಮಿಸನ್ ಬೌಲಿಂಗ್‍ನಲ್ಲಿ ಮಯಾಂಕ್ (13 ರನ್, 2 ಬೌಂಡರಿ) ವಿಕೆಟ್ ಕೀಪರ್ ಬೋನ್‍ಡೆಲ್‍ಗೆ ಕ್ಯಾಚ್ ನೀಡಿ ಡಗ್‍ಔಟ್‍ನತ್ತ ಹೆಜ್ಜೆ ಹಾಕಿದರು. ಮಯಾಂಕ್ ಅಗರ್‍ವಾಲ್ ಔಟಾದರೂ ಕೂಡ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತ ಗಿಲ್, ಉಪನಾಯಕ ಚೇತೇಶ್ವರ ಪೂಜಾರರೊಂದಿಗೆ 2ನೆ ವಿಕೆಟ್‍ಗೆ 61 ರನ್‍ಗಳ ಜೊತೆಯಾಟ ನೀಡಿದರು.

ಈ ನಡುವೆ ಗಿಲ್ ಟೆಸ್ಟ್ ಜೀವನದ 3ನೆ ಅರ್ಧಶತಕ (52 ರನ್, 5 ಬೌಂಡರಿ, 1 ಸಿಕ್ಸರ್) ಗಳಿಸಿದ್ದಾಗ ಜೆಮಿಸ್ಸನ್ ಬೌಲಿಂಗ್‍ನಲ್ಲಿ ಕ್ಲೀನ್ ಬೋಲ್ಡ್ ಆದರು.
ತಾಳ್ಮೆಯುತ ಆಟ ಪ್ರದರ್ಶಿಸುತ್ತಿದ್ದ ಪೂಜಾರ ಕೂಡ 26 ರನ್ ಗಳಿಸಿದ್ದಾಗ ವೇಗಿ ಸೋಥಿ ಬೌಲಿಂಗ್‍ನಲ್ಲಿ ಔಟಾದರು. ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ ಭಾರತ 3 ವಿಕೆಟ್ ಕಳೆದುಕೊಂಡು 132 ರನ್ ಗಳಿಸಿದ್ದು ನಾಯಕ ಅಜೆಂಕಾ ರಹಾನೆ ( 28 ರನ್, 5 ಬೌಂಡರಿ) ಹಾಗೂ ಶ್ರೇಯಸ್ ಅಯ್ಯರ್
( 8ರನ್, 1 ಬೌಂಡರಿ) ಕ್ರೀಸ್‍ನಲ್ಲಿದ್ದರು.

ಟೆಸ್ಟ್‍ಗೆ ಶ್ರೇಯಸ್ ಎಂಟ್ರಿ ಪಾಂಟಿಂಗ್ ಶಹಬಾಸ್‍ಗಿರಿ
ಕಾನ್ಪುರ, ನ.25- ನ್ಯೂಜಿಲ್ಯಾಂಡ್ ವಿರುದ್ಧ ನಡೆಯುತ್ತಿರುವ ಮೊದಲ ಪೇಟಿಯಂ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿರುವ ಟೀಂ ಇಂಡಿಯಾದ ಯುವ ಆಟಗಾರ ಶ್ರೇಯಸ್ ಅಯ್ಯರ್‍ಗೆ ಆಸ್ಟ್ರೇಲಿ ಯಾದ ವಿಶ್ವಕಪ್ ಚಾಂಪಿಯನ್ ನಾಯಕ ರಿಕ್ಕಿ ಪಾಂಟಿಂಗ್ ಅವರು ಶಹಬಾಸ್‍ಗಿರಿ ಹೇಳಿದ್ದಾರೆ.

ಐಪಿಎಲ್‍ನಲ್ಲಿ ರಿಕ್ಕಿ ಪಾಂಟಿಂಗ್ ತರಬೇತಿ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕನಾಗಿರುವ ಶ್ರೇಯಾಸ್ ಐಯ್ಯರ್‍ರನ್ನು ಟೆಸ್ಟ್ ಜೆರ್ಸಿಯಲ್ಲಿ ನೋಡಲು ಹೆಮ್ಮೆ ಆಗುತ್ತಿದೆ, ನೀವು ಒಂದು ವರ್ಷದಿಂದ ಪಟ್ಟ ಕಷ್ಟಕ್ಕೆ ಇಂದು ಫಲ ಸಿಕ್ಕಿದೆ ನಿಮ್ಮ ಕ್ರಿಕೆಟ್ ಜೀವನ ಇನ್ನೂ ಮೇಲ್ಪಟ್ಟಕ್ಕೆ ತಲುಪಲಿ ಎಂದು ಆಶಿಸಿದ್ದಾರೆ.

ನ್ಯೂಜಿಲ್ಯಾಂಡ್ ವಿರುದ್ಧ 18 ವರ್ಷಗಳ ನಂತರ ಟೆಸ್ಟ್ ಪಾದಾರ್ಪಣೆ ಮಾಡಿದ ಆಟಗಾರ ಎಂಬ ಕೀರ್ತಿಗೆ ಶ್ರೇಯಸ್ ಅಯ್ಯರ್ ಭಾಜನರಾಗಿದ್ದಾರೆ, ಈ ಹಿಂದೆ 2003ರಲ್ಲಿ ಯುವರಾಜ್‍ಸಿಂಗ್ ಕೂಡ ನ್ಯೂಜಿಲ್ಯಾಂಡ್ ವಿರುದ್ಧವೇ ಟೆಸ್ಟ್ ಪಾರ್ದಾಪಣೆ ಮಾಡಿದ್ದರು.
ಭಾರತದ 303ನೆ ಟೆಸ್ಟ್ ಆಟಗಾರನಾಗಿ ಪಾದಾರ್ಪಣೆ ಮಾಡಿದ ಶ್ರೇಯಾಸ್ ಐಯ್ಯರ್‍ಗೆ ಖ್ಯಾತ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕ್ಯಾಪ್ ನೀಡಿ ಹಾರೈಸಿದರು.

Facebook Comments