ಸಿಡಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ಜಾರಕಿಹೊಳಿ ಪರ ವಕೀಲರ ರಂಗಪ್ರವೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.5- ದಿನೆ ದಿನೇ ಹೊಸ ಬೆಳವಣಿಗೆಗೆ ಕಾರಣವಾಗುತ್ತಿರುವ ಸಿ.ಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರವಾಗಿ ವಕೀಲರು ರಂಗಪ್ರವೇಶ ಮಾಡಿದ್ದಾರೆ. ಈವರೆಗೂ ದೂರುದಾರಳಾದ ಯುವತಿಯ ವಿಡಿಯೋ ಹೇಳಿಕೆಗಳು, ಲಿಖಿತ ದೂರಿನ ಪ್ರತಿಗಳು ಮತ್ತು ಅವರ ವಕೀಲರ ಹೇಳಿಕೆಗಳೇ ಹೆಚ್ಚಾಗಿ ಚರ್ಚೆಯಾಗುತ್ತಿದ್ದವು.ರಮೇಶ್ ಜಾರಕಿಹೊಳಿ ನೇರವಾಗಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಒಂದೆರಡು ಬಾರಿ ಮಾಧ್ಯಮಗಳ ಮುಂದೆ ಮಾತನಾಡಿದ್ದರು. ಯುವತಿಯ ಪೋಷಕರು ಕೂಡ ಎರಡು ಬಾರಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಅಜ್ಞಾತ ಸ್ಥಳದಲ್ಲಿದ್ದ ಯುವತಿ ಹೊರಬಂದು ನ್ಯಾಯಾಧೀಶರ ಮುಂದೆ ಸಿಆರ್‍ಪಿಸಿ 164 ಪ್ರಕಾರ ಹೇಳಿಕೆ ದಾಖಲಿಸಿದ ಬಳಿಕ ಪ್ರಕರಣದ ಗಂಭೀರತೆ ಹೆಚ್ಚಾಗುತ್ತಾ ಹೋಯಿತು. ನಂತರ ರಮೇಶ್ ಜಾರಕಿಹೊಳಿ ಮತ್ತು ಯುವತಿ ಪೋಷಕರು ಯಾವುದೇ ಹೇಳಿಕೆ ನೀಡದೆ ತಟಸ್ಥರಾಗಿ ಉಳಿದರು. ದೂರುದಾರಳ ಪರವಾಗಿ ವಕೀಲರು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದರು. ಆರೋಪಿಯನ್ನು ಬಂಧಿಸಿ ಎಂದು ಆಗ್ರಹಿಸುತ್ತಿದ್ದರು. ಯುವತಿ ಎಸ್‍ಐಟಿ ತನಿಖೆ ಮೇಲೆ ಅನುಮಾನ ವ್ಯಕ್ತಪಡಿಸಿ ನಿನ್ನೆಯಷ್ಟೇ ಪೋಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು.

ಪ್ರಕರಣದ ಹಿಡಿತ ಬಿಗಿಗೊಳ್ಳುತ್ತಿದ್ದಂತೆ ನಿನ್ನೆ ಸಂಜೆಯಿಂದ ರಮೇಶ್ ಜಾರಕಿಹೊಳಿ ಪರವಾಗಿ ವಕೀಲ ಶ್ಯಾಮ್‍ಸುಂದರ್ ಅವರು ರಂಗಪ್ರವೇಶ ಮಾಡಿದ್ದಾರೆ. ದೂರುದಾರಳ ಎಲ್ಲಾ ಆರೋಪಗಳಿಗೂ ಸಮಜಾಯಿಷಿ ನೀಡಲು ಮುಂದಾಗಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಶ್ಯಾಮ್‍ಸುಂದರ್ ಅವರು, ರಮೇಶ್ ಜಾರಕಿಹೊಳಿಯವರು ಯಾವುದೇ ರೀತಿಯ ಪ್ರಭಾವ ಬೀರಿಲ್ಲ. ಒಂದು ವೇಳೆ ಪ್ರಭಾವ ಬೀರಬೇಕು ಎಂದು ಬಯಸಿದರೆ ಪ್ರಥಮ ಮಾಹಿತಿ ವರದಿ (ಎಫ್‍ಐಆರ್) ದಾಖಲಾಗಲು ಅವಕಾಶವನ್ನೆ ನೀಡುತ್ತಿರಲಿಲ್ಲ. ಅವರು ಎಲ್ಲಿಯೂ ತಲೆಮರೆಸಿಕೊಂಡಿಲ್ಲ. ಕಳೆದ ಬಾರಿ ವಿಚಾರಣೆಗೆ ಹಾಜರಾದಾಗಲೇ ಚಳಿಜ್ವರದಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.

ಅವರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ.ಅವರ ಕಡೆಯವರಿಗೆ ಖಚಿತವಾದ ಮಾಹಿತಿ ನೀಡುವಂತೆ ಹೇಳಿದ್ದೇನೆ. ರಮೇಶ್ ಜಾರಕಿಹೊಳಿ ಅವರಿಗೆ ವಿಚಾರಣೆಗೆ ಹಾಜರಾಗಲು ಎಸ್‍ಐಟಿ ಈವರೆಗೂ ನೋಟಿಸ್ ನೀಡಿಲ್ಲ.ಹಾಗಾಗಿ ಸೋಮವಾರ ವಿಚಾರಣೆಗೆ ಗೈರು ಹಾಜರಾಗಿದ್ದಾರೆ ಎಂಬ ಆರೋಪ ಅಪ್ರಸ್ತುತ. ನೋಟಿಸ್ ನೀಡದೇ ಇದ್ದರೆ ಏಕಾಏಕಿ ಪೋಲೀಸರ ಮುಂದೆ ಹೋಗುವುದು ಸರಿಯಲ್ಲ ಎಂದಿದ್ದಾರೆ.

ಇಡೀ ಪ್ರಕರಣದಲ್ಲಿ ಆಗಿರುವುದೇ ಬೇರೆ. ಅದನ್ನು ಬಿಂಬಿಸುತ್ತಿರುವುದೇ ಬೇರೆ. ಸ್ವಯಂ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿರುವ ಅತ್ಯಾಚಾರದ ಪ್ರಕರಣ ದೇಶದಲ್ಲಿ ಇದೇ ಮೊದಲನೆಯದಿರಬಹುದು. ಅತ್ಯಾಚಾರದ ಸನ್ನಿವೇಶಗಳನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಇಲ್ಲಿ ಸ್ವಯಂ ಚಿತ್ರೀಕರಣವಾಗಿದೆ. ಎಲ್ಲವನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತದೆ.

ದೂರುದಾರರು ಮತ್ತು ಅವರ ಪರ ವಕೀಲರು ಎಸ್‍ಐಟಿ ತನಿಖೆ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ತನಿಖಾಧಿಕಾರಿಗಳ ಸ್ವಾತಂತ್ರ್ಯಕ್ಕೆ ಯಾರು ಅಡ್ಡಿಪಡಿಸಬಾರದು. ಸಮಗ್ರ ವಿಚಾರಣೆ ನಡೆಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ. ಯುವತಿ ಪರ ವಕೀಲರು ಪ್ರಕರಣವನ್ನು ಮುಂದಿಟ್ಟುಕೊಂಡು ಸ್ವಯಂ ಜಾಹಿರಾತು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಶ್ಯಾಮ್‍ಸುಂದರ್ ಸಲಹೆ ನೀಡಿದ್ದಾರೆ.

Facebook Comments