ನಿವೃತ್ತ ಎಸ್‍ಐನನ್ನು ನಂಬಿಸಿ ಕರೆದೊಯ್ದು ಕತ್ತುಕೊಯ್ದು ಹತ್ಯೆ ಮಾಡಿದ ಆಪ್ತ ಸ್ನೇಹಿತ ..!

ಈ ಸುದ್ದಿಯನ್ನು ಶೇರ್ ಮಾಡಿ

Police-SI-inspector--01
ಚನ್ನಪಟ್ಟಣ, ಜೂ.27- ದೇವಸ್ಥಾನಕ್ಕೆ ಹೋಗಿ ಬರೋಣವೆಂದು ನಂಬಿಸಿ ಆಪ್ತ ಸ್ನೇಹಿತನೇ ನಿವೃತ್ತ ಸಿಸಿಬಿ ಸಬ್‍ ಇನ್ಸ್ ಪೆಕ್ಟರ್ ನ್ನು ಬೆಂಗಳೂರಿನಿಂದ ಬೈಕ್‍ನಲ್ಲಿ ಕರೆದೊಯ್ದು ಮಾರ್ಗಮಧ್ಯೆ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಎಂ.ಕೆ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರ ಮೂಲದ ಶಂಕರ್(55) ಎಂಬಾತ ನಿವೃತ್ತ ಸಿಸಿಬಿ ಸಬ್‍ಇನ್ಸ್‍ಪೆಕ್ಟರ್ ಸಿದ್ದಲಿಂಗಯ್ಯ (60) ಎಂಬುವರನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಬೆಂಗಳೂರಿನ ಜೆ.ಪಿ.ನಗರದ 6ನೇ ಹಂತದಲ್ಲಿ ವಾಸವಾಗಿದ್ದ ಸಿದ್ದಲಿಂಗಯ್ಯ ಹಾಗೂ ಜೆ.ಪಿ.ನಗರದಲ್ಲಿ ಗ್ಯಾರೇಜ್ ನಡೆಸುತ್ತಿದ್ದ ಶಂಕರ್ ಸುಮಾರು 30 ವರ್ಷಗಳಿಂದ ಸ್ನೇಹಿತರು. ಸಿದ್ದಲಿಂಗಯ್ಯ ಅವರ ಹಣಕಾಸು ವ್ಯವಹಾರಗಳನ್ನೆಲ್ಲ ಶಂಕರ್‍ನೇ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಸಿದ್ದಲಿಂಗಯ್ಯ ಅವರು ಶಂಕರ್‍ನನ್ನು ನಂಬಿ ಈತನ ಗ್ಯಾರೇಜ್‍ನಲ್ಲೇ ಚಿಕ್ಕದಾಗಿ ಫೈನಾನ್ಸ್ ಸಹ ಆರಂಭಿಸಿದ್ದರು. ಸಿದ್ದಲಿಂಗಯ್ಯ ಅವರ ಶೇ.75ರಷ್ಟು ಹಣಕಾಸು ವ್ಯವಹಾರವನ್ನು ಈತನೇ ನಿಭಾಯಿಸುತ್ತಿದ್ದನು.

ಸ್ನೇಹಿತ ಶಂಕರ್‍ನನ್ನು ಸಂಪೂರ್ಣವಾಗಿ ನಂಬಿದ್ದ ಸಿದ್ದಲಿಂಗಯ್ಯ ಅವರು ಆತ ಹೇಳಿದ್ದಕ್ಕೆಲ್ಲ ಸಹಕರಿಸುತ್ತಿದ್ದರು. ಇವರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಶಂಕರ್‍ಗೆ ಯಾವ ಆಲೋಚನೆ ಬಂದಿತೋ ಏನೋ ಗೊತ್ತಿಲ್ಲ. ನಿನ್ನೆ ಸಂಜೆ ದೇವಸ್ಥಾನಕ್ಕೆ ಹೋಗೋಣ ಎಂದು ಸಿದ್ದಲಿಂಗಯ್ಯ ಅವರನ್ನು ತನ್ನ ಬೈಕ್‍ನಲ್ಲಿ ಬೆಂಗಳೂರಿನ ಜೆ.ಪಿ.ನಗರದಿಂದ ಕರೆದುಕೊಂಡು ಶಂಕರ್ ಚನ್ನಪಟ್ಟಣ ಸಮೀಪ ಬಂದು ಎಂ.ಕೆ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡಗೆರೆಯ ಮಾಗನೂರು ಕ್ರಾಸ್ ಬಳಿ ಕರೆತಂದಿದ್ದಾನೆ.  ಸುಮಾರು 9.30ರ ಸಮಯದಲ್ಲಿ ಸಿದ್ದಲಿಂಗಯ್ಯ ಅವರಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದಾನೆ.

ತಕ್ಷಣ ಪೊಲೀಸರು ಆರೋಪಿಯನ್ನು ಕೊಲೆ ಮಾಡಿರುವ ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿ ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾನೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಕೊಲೆಯ ಭೀಕರತೆ ಗಮನಿಸಿದರೆ ಹಣಕಾಸು ವ್ಯವಹಾರವೋ ಅಥವಾ ಅನೈತಿಕ ಸಂಬಂಧವೋ ಎಂಬ ಬಗ್ಗೆ ಅನುಮಾನ ಮೂಡಿದೆ. ಸುದ್ದಿ ತಿಳಿದು ಸಿದ್ದಲಿಂಗಯ್ಯ ಅವರ ಸಂಬಂಧಿಕರು ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಆಗಮಿಸಿದ್ದು, ಅವರ ರೋದನ ಮುಗಿಲುಮುಟ್ಟಿತ್ತು.

Facebook Comments

Sri Raghav

Admin