ಲೇಡಿ ಎಸ್‍ಐ ಮೇಲೆ ಎಎಸ್‍ಐ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ನ.12- ರಾತ್ರಿ ಗಸ್ತಿನ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಎಸ್‍ಐ ಮೇಲೆ ಎಎಸ್‍ಐ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಸರಾಳು ಪೊಲೀಸ್ ಠಾಣೆಯ ಮಹಿಳಾ ಎಸ್‍ಐ ಜಯಗೌರಿ ಎಂಬುವವರ ಮೇಲೆ ಎಎಸ್‍ಐ ಶಿವನಂಜೇಗೌಡ ಎಂಬುವವರು ನವೆಂಬರ್ 9ರಂದು ಹಲ್ಲೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ನ.9ರಂದು ಸಿಎಂ ಕಾರ್ಯಕ್ರಮದ ನಿಮಿತ್ತ ಎಸ್‍ಐ ಅವರು ತೆರಳಿ ಸಂಜೆ ಠಾಣೆಗೆ ವಾಪಸಾದಾಗ ಎಎಸ್‍ಐ ಶಿವನಂಜೇಗೌಡ ಠಾಣೆಯಲ್ಲಿದ್ದರು. ಈ ಸಂದರ್ಭದಲ್ಲಿ ರಾತ್ರಿ ಕರ್ತವ್ಯ ನಿರ್ವಹಣೆ ವಿಷಯವಾಗಿ ಚರ್ಚೆ ನಡೆಯುತ್ತಿದ್ದಾಗ ಠಾಣೆಯಲ್ಲಿ ಸಿಬ್ಬಂದಿ ಇಲ್ಲ ಎಂದು ಎಎಸ್‍ಐ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್‍ಐ ಅವರು ಈಗ ನೀವು ಮನೆಗೆ ಹೋಗಿ. ರಾತ್ರಿ ನೀವೇ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದಾಗ ಕುಪಿತಗೊಂಡು ಜಗಳವಾಡಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಾಗ ಒಂದು ಹಂತದಲ್ಲಿ ಎಸ್‍ಐ ಅವರನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಮಹಿಳಾ ಅಧಿಕಾರಿ ಎಸ್‍ಪಿಗೆ ದೂರು ನೀಡಿದ್ದಾರೆ.

ಹಲ್ಲೆ, ದೌರ್ಜನ್ಯ ಎಸಗಿದ ಆರೋಪದಡಿ ಎಎಸ್‍ಐ ವಿರುದ್ಧ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಒಟ್ಟಾರೆ ಮಂಡ್ಯ ಪೊಲೀಸ್ ಠಾಣೆಯ ಮರ್ಯಾದೆ ಬೀದಿಗೆ ಬಂದಂತಾಗಿದೆ.

Facebook Comments