“ರಾಜಕಾರಣಿಗಳು ಅಂದ್ರೆ ಲಫಂಗರು ಅನ್ನೋ ಹಾಗೆ ಆಗಿದೆ” : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.6- ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಘಟನೆಗಳನ್ನು ನೋಡಿರಲಿಲ್ಲ. ರಾಜಕಾರಣಿಗಳು ಅಂದರೆ ಲಫಂಗರು ಅನ್ನುವ ರೀತಿ ಆಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸಚಿವರುಗಳು ಮುಂಜಾಗ್ರತೆಯಾಗಿ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಪ್ರತಿಕ್ರಿಯಿಸಿ ಸಿಡಿ ಇದೆ ಎಂದು ಗೊತ್ತಿದ್ದರೆ ಮಾತ್ರ ಅದನ್ನು ರಾಜಕೀಯ ಷಡ್ಯಂತ್ರ ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ ಸುಧಾಕರ್ ಅವರದು ಸಿಡಿ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಕೆಲವರು ಮಾಡುವ ತಪ್ಪುಗಳಿಂದ ಜನ ಶಾಪ ಹಾಕುತ್ತಿದ್ದಾರೆ. ರಾಜಕಾರಣಿಗಳು ಎಂದರೆ ಲಫಂಗರು ಎನ್ನುವ ರೀತಿ ಆಗಿದೆ. ಸಮಾಜಕ್ಕೆ ರಾಜಕಾರಣಿಗಳ ಬಗ್ಗೆ ತಪ್ಪು ಗ್ರಹಿಕೆ ರವಾನೆಯಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟಿರುವುದರಿಂದ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರ ಬೆಂಬಲಿಗರು ಪ್ರತಿಭಟನೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು ಎಂದರು.

ಸದಾನಂದಗೌಡ ಅವರು ಸಚಿವರ ಬಗ್ಗೆ ನೀಡಿರುವ ಹೇಳಿಕೆಯನ್ನು ನಾನು ನೋಡಿಲ್ಲ. ಹಾಗಾಗಿ ಗೊತ್ತಿಲ್ಲದೆ ಪ್ರತಿಕ್ರಿಯಿಸುವುದಿಲ್ಲ. ರಮೇಶ್ ಜಾರಕಿಹೊಳಿ ಅವರ ಬಗ್ಗೆಯಾಗಲಿ ಅಥವಾ ಬೇರೆ ಯಾವ ಸಚಿವರ ಬಗ್ಗೆಯಾಗಲೀ ನನಗೆ ಅನುಕಂಪ ಇಲ್ಲ. ಬಿಜೆಪಿ ಸರ್ಕಾರದಲ್ಲಿ ಎಲ್ಲರೂ ಕಳ್ಳರೇ ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರನ್ನು ಹೆದರಿಸಲು ಸುಳ್ಳು ಕೇಸು ಹಾಕಲಾಗುತ್ತಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಶಾಸಕ ಸಂಗಮೇಶ್ ಅವರ ಕುಟುಂಬದ ಮೇಲೆ ಕೇಸು ಹಾಕಿ ಅವರ ಪುತ್ರನನ್ನು ಬಂಸಲಾಗಿದೆ. ಇದರ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಪುತ್ರ ಹಾಗೂ ಸಂಸದ ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಅವರ ಕೈವಾಡವಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಶಾಸಕರು ಮತ್ತು ಅವರ ಮಕ್ಕಳ ಮೇಲೆ ಕೇಸು ಹಾಕಿದ್ದಾರೆ. ಈ ರೀತಿ ಸುಳ್ಳು ಕೇಸು ಹಾಕುವ ಅಕಾರ ಯಾರಿಗೂ ಇಲ್ಲ. ರಾಜಕೀಯವಾಗಿಯೂ ಕೂಡ ಇದು ಸರಿಯಲ್ಲ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಪ್ರತಿ ಬಾರಿ ಬಜೆಟ್ ಮಂಡಿಸಿದಾಗಲೂ ಜನಪ್ರಿಯ ಕಾರ್ಯಕ್ರಮಗಳನ್ನು ನೀಡುವುದಾಗಿ ಹೇಳುತ್ತಲೇ ಬಂದಿದ್ದಾರೆ. ಆದರೆ, ಯಾವ ಕಾಲದಲ್ಲೂ ಅವರು ಸತ್ಯ ಹೇಳಿಲ್ಲ. ಸುಳ್ಳೇ ಅವರ ಮನೆ ದೇವರು. ನೀಡಿದ ಭರವಸೆಗಳನ್ನು ಈಡೇರಿಸುವುದಿಲ್ಲ ಎಂದು ಹೇಳಿದರು.

ಈ ಹಿಂದಿನ ಬಜೆಟ್‍ನಲ್ಲೂ ಕೂಡ ಜನಪ್ರಿಯ ಬಜೆಟ್ ಮಾಡುತ್ತೇನೆ, ಮಹಿಳೆಯರಿಗೆ, ಹಿಂದುಳಿದವರಿಗೆ, ಯುವಕರಿಗೆ ಆದ್ಯತೆ ನೀಡುತ್ತೇನೆ ಎಂದಿದ್ದರು. ಆದರೆ, ಹೇಳಿದಂತೆ ನಡೆದುಕೊಂಡಿದ್ದಾರೆಯೇ, ಇವೆಲ್ಲವೂ ಹೇಳಲು ಚೆಂದ. ಆದರೂ ಯಾವುದೂ ಜಾರಿಯಾಗುವುದಿಲ್ಲ.

ಹೊಸ ಯೋಜನೆಗಳಿಗೆ ಹಣ ಇಲ್ಲ. ಹಳೆ ಯೋಜನೆಗಳನ್ನು ಮುಂದುವರಿಸಲು ಆಸಕ್ತಿ ಇಲ್ಲ. ಈ ಹಿಂದೆ ನಾವು ರೂಪಿಸಿದ್ದ ಕಾರ್ಯಕ್ರಮಗಳನ್ನು ಕೂಡ ನಿಲ್ಲಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮೊದಲು ಯಡಿಯೂರಪ್ಪ ಅವರು ಬಜೆಟ್ ಮಂಡನೆ ಮಾಡಲಿ, ನಂತರ ಅದು ಜನಪ್ರಿಯ ಬಜೆಟ್ ಅಥವಾ ಜನವಿರೋ ಬಜೆಟ್ ಎಂಬುದನ್ನು ಚರ್ಚೆ ಮಾಡೋಣ ಎಂದರು.

Facebook Comments

Sri Raghav

Admin