ದಲಿತ ಕವಿ ಡಾ. ಸಿದ್ದಲಿಂಗಯ್ಯ ವಿಧಿವಶ, ಗಣ್ಯರ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಬಂಡಾಯ ಸಾಹಿತ್ಯದ ಮೂಲಕ ದಲಿತ ಹೋರಾಟಕ್ಕೆ ಕಿಚ್ಚು ಹಚ್ಚಿದ್ದ ಹಿರಿಯ ಸಾಹಿತಿ ಸಿದ್ದಲಿಂಗಯ್ಯ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಕಳೆದ 15 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಲಿಂಗಯ್ಯ ವಿಧಿವಶರಾಗಿದ್ದಾರೆ. ಅವರ ಪತ್ನಿಗೂ ಕೊರೊನಾ ಸೋಂಕು ತಗುಲಿತ್ತು, ಈಗ ಚೇತರಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ದಲಿತ ಹೋರಾಟದ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದ ಸಿದ್ದಲಿಂಗಯ್ಯ, ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದ ಸಿದ್ದಲಿಂಗಯ್ಯ ಅವರಿಗೆ ಹಲವಾರು ಪ್ರಶಸ್ತಿಗಳು ಸಂದಿದ್ದವು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

1975ರಲ್ಲಿ ಅವರ ಹೊಲೆಮಾದಿಗ ಹಾಡು, ಕವನ ಸಂಕಲನ ಪ್ರಕಟಗೊಂಡಿತು, ಬಳಿಕ ಸಾವಿರಾರು ನದಿಗಳು, ಕಪ್ಪುಕಾಡಿನ ಹಾಡು, ಮೆರವಣಿಗೆ, ನನ್ನ ಜನಗಳು ಮತ್ತು ಇತರೆ ಕವಿತೆಗಳು, ಆಯ್ದ ಕವನಗಳು, ಅಲ್ಲೆಂಕುಂತವರು ಮುಂತಾದ ಕವನ ಸಂಕಲನ ಪ್ರಕಟಗೊಂಡಿದೆ.

# ಮುಖ್ಯಮಂತ್ರಿ ಸಂತಾಪ:
ದಲಿತರ ನೋವನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿಳಿಸಿ, ಅವರನ್ನು ಜಾಗೃತಗೊಳಿಸಿದವರು ಡಾ. ಸಿದ್ದಲಿಂಗಯ್ಯ ನೋವಿನ ಕೆಂಡವನ್ನೇ ಒಡಲೊಳಗಿರಿಸಿಕೊಂಡ ಅವರ ಕವನಗಳು ದಲಿತ ಚಳವಳಿಗೆ ಕಾವು ನೀಡಿತ್ತು.

ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯ ಅವರ ನಿಧನದಿಂದ ಸಾಮಾಜಿಕ ಕಳಕಳಿಯ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.

# ಕೆಎಸ್‌ ಈಶ್ವರಪ್ಪ ಸಂತಾಪ:
ನಿಧನ ಈ ನಾಡಿಗೆ ಬಹುದೊಡ್ಡ ಆಘಾತ. ದಲಿತ ಪರ ಹೋರಾಟದ ಮೂಲಕವೇ ಶ್ರಮಿಕರ ನೋವಿಗೆ ದನಿಯಾಗಿದ್ದ ಸಿದ್ದಲಿಂಗಯ್ಯ ಧೀಮಂತ ನಾಯಕರಾಗಿದ್ದರು, ಮೃತರಿಗೆ ಚಿರಶಾಂತಿ ಸಿಗಲಿ ಎಂದು ಹೇಳಿದ್ದಾರೆ.

ಕವಿ ಸಿದ್ದಲಿಂಗಯ್ಯ ಅವರ ನಿಧನಕ್ಕೆ ಸಚಿವ ಸಿ.ಪಿ. ಯೋಗೇಶ್ವರ ಸಂತಾಪ: ಸಿದ್ದಲಿಂಗಯ್ಯ ಅವರ ನಿಧನದಿಂದ ಈ ನಾಡಿಗೆ ಬಹುದೊಡ್ಡ ನಷ್ಟವಾಗಿದೆ, ದಲಿತ ಪರ ಹೋರಾಟದ ಮೂಲಕವೇ ಶ್ರಮಿಕರ ನೋವಿಗೆ ದನಿಯಾಗಿದ್ದ ಸಿದ್ದಲಿಂಗಯ್ಯ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಭಗವಂತ ನೀಡಲಿ.

# ಡಿ.ಕೆ. ಶಿವಕುಮಾರ್ ಸಂತಾಪ:
‘ಸಿದ್ದಲಿಂಗಯ್ಯ ಅವರ ಅಗಲಿಕೆ ಸುದ್ದಿ ಬಹಳ ನೋವು ತಂದಿದೆ, ದಲಿತ ಹೋರಾಟ, ಸಾಮಾಜಿಕ ಸಮಾನತೆಗಾಗಿ ಸಾಹಿತ್ಯದ ಮೂಲಕ ಹೋರಾಟ ಆರಂಭಿಸಿದ ಮಹಾನ್ ಸಾಹಿತಿ ಸಿದ್ದಲಿಂಗಯ್ಯ , ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಆತ್ಮಕಥನ, ಸಂಶೋಧನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಸಿದ್ದಲಿಂಗಯ್ಯ ಅಗಲಿಕೆ ದಲಿತ ಹೋರಾಟ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ.

# ಸಿದ್ದರಾಮಯ್ಯ ಸಂತಾಪ:
ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ‌ ಸಮಾನತೆಯ ಹೋರಾಟವನ್ನು‌ ಮುನ್ನಡೆಸಿದ್ದ ದಲಿತ ಕವಿ, ವಿಧಾನಪರಿಷತ್‌ನ ಮಾಜಿ ಸದಸ್ಯ ಮತ್ತು ನನ್ನ ಆತ್ಮೀಯ ಮಿತ್ರ ಸಿದ್ದಲಿಂಗಯ್ಯನವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಸಾವನ್ನು ಮೀರಿದ ಸಾಹಿತ್ಯದ ಮೂಲಕ ಅವರು ಅಜರಾಮರ. ಅವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ.

Facebook Comments

Sri Raghav

Admin