ಸಿದ್ಧರಬೆಟ್ಟದಲ್ಲಿರುವ ಕೊಳದ ನೀರಿನಲ್ಲಿದೆ ಚರ್ಮವ್ಯಾಧಿ ನಿವಾರಿಸುವ ದಿವ್ಯೌಷಧಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬಹುತೇಕ ಬಯಲುಸೀಮೆ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಆದರೆ, ಇದೇ ಭಾಗದಲ್ಲಿ ಇರುವ ಅಪರೂಪದ ಸಿದ್ಧರಬೆಟ್ಟದಲ್ಲಿ ಮಾತ್ರ ನೀರಿನ ಸೆಲೆ ನಿರಂತರವಾಗಿರುತ್ತದೆ. ಅದು ಕೂಡ ಔಷಧೀಯ ಗುಣಗಳುಳ್ಳ ನೀರು ಎಂಬುದು ವಿಶೇಷ ಹಾಗೂ ವಿಸ್ಮಯ. ಹಾಗೆ ನೋಡಿದರೆ ಇಡೀ ಬೆಟ್ಟವೇ ವಿಸ್ಮಯ.

ತುಮಕೂರು ಜಿಲ್ಲಾ ಮಧುಗಿರಿ ತಾಲೂಕಿನಲ್ಲಿ ಸಾಕಷ್ಟು ಬೆಟ್ಟ-ಗುಡ್ಡಗಳಿವೆ. ಅವುಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿರುವುದು ಸಿದ್ಧರಬೆಟ್ಟ. ಈ ಬೆಟ್ಟದ ತುತ್ತತುದಿಯಲ್ಲಿ ಸಾಕಷ್ಟು ಗುಹೆಗಳೂ ಇವೆ. ಇಲ್ಲಿನ ಒಂದೊಂದು ಗುಹಾಂತರ ಗುಹೆಗಳು ಊಹೆಗೂ ನಿಲುಕದ ಶಕ್ತಿಯನ್ನು ಮೈಗೂಡಿಸಿಕೊಂಡಿವೆ ಎಂದು ಹಿರಿಯರು ಹೇಳುತ್ತಾರೆ.

ಈ ಬೆಟ್ಟದ ತುತ್ತತುದಿಯಲ್ಲಿ ಸಾಕಷ್ಟು ಗುಹೆಗಳೂ ಇವೆ. ಬೆಟ್ಟದ ಮೇಲ್ಭಾಗದಲ್ಲಿ ಇರುವ ಗುಹೆಯೊಂದರಲ್ಲಿ ಪುಟ್ಟದಾದ ಕೊಳವಿದ್ದು, ಅದರಲ್ಲಿ ನಿರಂತರವಾಗಿ ನೀರು ಸಂಗ್ರಹವಾಗಿರುತ್ತದೆ. ಇಲ್ಲಿ ನೀರು ಎಂದೂ ಬತ್ತಿಲ್ಲ. ಇಲ್ಲಿರುವ ಕೊಳ ಸಹ ಬೆಟ್ಟದ ಮೇಲ್ಭಾಗದಲ್ಲೇ ಇದೆ. ಯಾವ ಭಾಗದಿಂದ ನೀರು ಹರಿದು ಬಂದು ಇಲ್ಲಿ ಸಂಗ್ರಹವಾಗುತ್ತದೆ ಎಂಬುದು ನಿಗೂಢ.

ಇದು ಕೇವಲ ಸಾಮಾನ್ಯ ಮಳೆನೀರಿನ ಸಂಗ್ರಹವಾಗಿರದೆ ಅತ್ಯಮೂಲ್ಯ ಔಷಧೀಯ ಗುಣಗಳುಳ್ಳ ನೀರಾಗಿದೆ. 6 ಅಡಿ ಉದ್ದ 3 ಅಡಿ ಅಗಲದ ಕೊಳವಾಗಿದೆ. ಈ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದ ಬಹುತೇಕ ಕಾಯಿಲೆಗಳು ಗುಣಮುಖವಾಗಲಿವೆ ಎಂಬ ನಂಬಿಕೆ ಜನರದ್ದಾಗಿದೆ.

ವೈಜ್ಞಾನಿಕ ಮೂಲದ ಪ್ರಕಾರ, ನೀರಿನಲ್ಲಿ ಯಾವುದೇ ರೀತಿಯ ರಾಸಾಯನಿಕ ಅಂಶ ಇಲ್ಲ. ಬದಲಾಗಿ ಆಯುರ್ವೇದ ಗಿಡಮೂಲಿಕೆಗಳ ಗುಣಗಳಿದ್ದು, ಇದು ಸಂಶೋಧನೆಯಿಂದ ದೃಢಪಟ್ಟಿದೆ ಎನ್ನುತ್ತಾರೆ ಇಲ್ಲಿನ ಅರ್ಚಕ ಮಹೇಶ್.

ಬೇಸಿಗೆಯಲ್ಲಿ ಸುತ್ತಮುತ್ತಲ ಯಾವುದೇ ಗುಡ್ಡ ಪ್ರದೇಶದಲ್ಲಿ ಮಳೆಯಾಗದಿದ್ದರೂ ಈ ಸಿದ್ಧರಬೆಟ್ಟದಲ್ಲಿರುವ ಈ ಗುಹೆಯಲ್ಲಿನ ಕೊಳ ಇದುವರೆಗೂ ಬತ್ತಿರುವ ಉದಾಹರಣೆಗಳೇ ಇಲ್ಲ. ಗುಹೆಯಲ್ಲಿರುವ ಶಿವಲಿಂಗದ ಮೂಲಕವೂ ನೀರು ಹರಿದು ಬರುವುದು ಕೂಡ ಇಲ್ಲಿನ ವಿಶೇಷವಾಗಿದೆ.

ಇಲ್ಲಿಗೆ ಬರುವ ಭಕ್ತರು ಬಾಟಲ್‍ಗಳಲ್ಲಿ ಇಲ್ಲಿನ ನೀರನ್ನು ಸಂಗ್ರಹಿಸಿಕೊಂಡು ಹೋಗುತ್ತಾರೆ. ಅದನ್ನು ಔಷಧಿ ರೂಪದಲ್ಲಿ ಕುಡಿದು ಸಿದ್ಧರಬೆಟ್ಟದ ಸಿದ್ದೇಶ್ವರ ಸ್ವಾಮಿಯ ಕೃಪೆಗೆ ಪಾತ್ರ ರಾಗುತ್ತಾರೆ. ರಾಜ್ಯದ ನಾನಾ ಕಡೆಗಳಿಂದ ಸಿದ್ಧರಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಇದೆ. ಇದನ್ನು ನಿಜಕ್ಕೂ ಸಂಜೀವಿನಿ ಬೆಟ್ಟವೆಂದೇ ಹೇಳುತ್ತಾರೆ. ಚರ್ಮರೋಗದ ನಿವಾರಣೆಗೆ ಈ ನೀರು ರಾಮಬಾಣದಂತೆ ಕೆಲಸ ಮಾಡುತ್ತದೆ. ಇಲ್ಲಿನ ನೀರನ್ನು ಕುಡಿದರೆ ಮತ್ತು ಸ್ನಾನ ಮಾಡಿದರೆ ರೋಗ ವಾಸಿಯಾಗುತ್ತದೆ ಎಂದು ಭಕ್ತರು ನಂಬಿದ್ದಾರೆ.

ಬೆಟ್ಟದ ತುದಿಗೆ ಹೋಗಿ ಪೂಜೆ ಸಲ್ಲಿಸುವ ಮೊದಲು ಪ್ರತಿಯೊಬ್ಬರಿಗೂ ಕಲ್ಯಾಣಿಯಲ್ಲಿರುವ ಈ ಪುಣ್ಯ ಜಲವನ್ನು ತೆಗೆದು ಮೂರು ಬಿಂದಿಗೆ ಅಥವಾ ಮೂರು ಚೊಂಬು ನೀರು ಹಾಕಲಾಗುತ್ತದೆ. ನಂತರ ಸಿದ್ದೇಶ್ವರ ಸ್ವಾಮಿಗೆ ಹರಕೆ ಹೊತ್ತವರು ಕೂದಲು ಕೊಟ್ಟು ಪೂಜೆ ಸಲ್ಲಿಸುತ್ತಾರೆ. ಬೇರೆಯವರು ನೀರನ್ನು ತಲೆಯ ಮೇಲೆ ಪ್ರೋಕ್ಷಣೆ ಮಾಡಿಸಿಕೊಳ್ಳಲೆಂದೇ ಆಗಮಿಸುವುದು ವಿಶೇಷ.

ಬಹುತೇಕ ಭಕ್ತರು ಸಿದ್ಧರಬೆಟ್ಟವನ್ನು ಸಂಜೀವಿನಿ ಬೆಟ್ಟವೆಂದೇ ನಂಬಿದ್ದಾರೆ. ರಾಮಾಯಣದಲ್ಲಿ ರಾಮ-ರಾವಣರ ನಡುವೆ ಯುದ್ಧ ನಡೆಯುವ ಸಂದರ್ಭದಲ್ಲಿ ರಾವಣನ ಸಹೋದರ ಇಂದ್ರಜಿತ್ ಬಿಟ್ಟಂತಹ ಸರ್ಪಾಸ್ತ್ರದಿಂದ ರಾಮ ಮೂರ್ಛೆ ಹೋಗುತ್ತಾನೆ. ಆಗ ಮತ್ತೊಬ್ಬ ಸಹೋದರ ವಿಭೀಷಣ ರಾಮನ ಭಕ್ತ ಆಂಜನೇಯನಿಗೆ ಸಂಜೀವಿನಿ ತರುವಂತೆ ಸಲಹೆ ನೀಡಿದ.

ಆಂಜನೇಯ ಸಂಜೀವಿನಿ ಅರಸುತ್ತ ಸಿದ್ಧರಬೆಟ್ಟಕ್ಕೆ ಬಂದಿದ್ದನೆಂದೂ, ಸಂಜೀವಿನಿ ಗಿಡ ಯಾವುದೆಂದು ತಿಳಿಯದೆ ಇಡೀ ಬೆಟ್ಟವನ್ನೇ ಹೊತ್ತೊಯ್ದನೆಂದೂ ಕಥೆ ಇದೆ.ಇದು ಏನೇ ಇರಲಿ, ಸಿದ್ಧರಬೆಟ್ಟ ಔಷಧೀಯ ಗಣಿಯಾಗಿದೆ ಎಂದು ಹೇಳುತ್ತಾರೆ.

ಸಿದ್ಧರಬೆಟ್ಟದಲ್ಲಿರುವ ಅಮೂಲ್ಯ ಔಷಧೀಯ ಮೂಲಿಕೆ ಇರುವುದರಿಂದಲೇ ಕಾಗೆಗಳು ಬರುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಒಟ್ಟಾರೆ ಇಡೀ ಬೆಟ್ಟ ವಿಸ್ಮಯವಾಗಿದ್ದು, ಜನರನ್ನು ಆಕರ್ಷಿಸುತ್ತಿದೆ.

– ಸಿ.ಎಸ್.ಕುಮಾರ್, ಚೇಳೂರು

Facebook Comments