ಕೊರೊನಾ ವಿಷಯದಲ್ಲಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ : ಸಿದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.14- ಕೊರೊನಾ ಬಗ್ಗೆ ಜನ ಸಾಮಾನ್ಯರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಮನವಿ ಮಾಡಿರುವ ಪ್ರತಿಪಕ್ಷಗಳ ನಾಯಕರು, ಆರೋಗ್ಯ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಬ್ಬರು ನಾಯಕರು ಕೊರೊನಾ ವಿಷಯದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಬೆಂಬಲ ವ್ಯಕ್ತಪಡಿಸಿದರು.ಸಿದ್ದರಾಮಯ್ಯ ಮಾತನಾಡಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾಗಾಗಿ ಪ್ರತ್ಯೇಕ ಬಜೆಟ್‍ಮಂಡಿಸಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರ ತಕ್ಷಣವೇ ಪ್ರತ್ಯೇಕ ಬಜೆಟ್ ಮಂಡಿಸಬೇಕು.

ಕೊರೊನಾ ವೈರಸನ್ನು ಕೇಂದ್ರ ಸರ್ಕಾರ ಸಮರ್ಪಕವಾಗಿ ನಿಯಂತ್ರಣ ಮಾಡುತ್ತಿಲ್ಲ. ಆರಂಭದಿಂದಲೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ಸೋಂಕು ಹರಡುವುದನ್ನು ತಡೆಯಬಹುದಿತ್ತು. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ ಎಂದು ಕಿಡಿಕಾರಿದರು. ಸ್ಥಳೀಯವಾಗಿ ಯಾರಿಂದಲೂ ಕೊರೊನಾ ವೈರಸ್ ಹರಡಿಲ್ಲ.

ವಿದೇಶಗಳಿಂದ ಬಂದವರಿಂದ ರೋಗ ಹರಡಿದೆ. ಕಲಬುರ್ಗಿಯಲ್ಲಿ ಸಾವನ್ನಪ್ಪಿದ್ದ ವ್ಯಕ್ತಿ ಸೌದಿಯಿಂದ ಬಂದಿದ್ದರು, ದೆಹಲಿಯಲ್ಲಿ ಸಾವನ್ನಪ್ಪಿರುವ ಮಹಿಳೆ ವಿದೇಶದಿಂದ ಬಂದ ಮಗನಿಂದ ಸೋಂಕು ತಗುಲಿಸಿಕೊಂಡಿದ್ದರು.ಕೊರೊನಾ ಬಗ್ಗೆ ಯಾರೂ ಅನಗತ್ಯವಾಗಿ ಆತಂಕಕ್ಕೊಳಗಾಗಬಾರದು. ಮಾಧ್ಯಮಗಳು ಕೂಡ ವೈಭವೀಕರಣ ವರದಿಗಳಿಂದ ಜನ ಸಾಮಾನ್ಯರನ್ನು ಭಯಬೀಳಿಸಬಾರದು.

ರೋಗ ಲಕ್ಷಣಗಳಿದ್ದರೆ ಮುನ್ನೆಚ್ಚರಿಕೆ ಕ್ರಮವಾಗಿ ಚಿಕಿತ್ಸೆ ಪಡೆದರೆ ಯಾವುದೇ ಸಮಸ್ಯೆಗಳಾಗುವುದಿಲ್ಲ ಎಂದು ಹೇಳಿದರು. ಆತಂಕದ ಸಂದರ್ಭದಲ್ಲಿ ನಾವು  ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಜನ ಸಾಮಾನ್ಯರ ದುಗುಡವನ್ನು ದೂರ ಮಾಡಲು ಸರ್ಕಾರ ತೆಗೆದುಕೊಳ್ಳುವ ನ್ಯಾಯೋಚಿತವಾದ ಎಲ್ಲಾ ಕ್ರಮಗಳಿಗೂ ನಮ್ಮ ಬೆಂಬಲವಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ಫೋನಿನಲ್ಲಿ ಕೊರೊನಾ ಕುರಿತಂತೆ ಕೇಳಿ ಬಂದಿರುವ ಜಾಗೃತಿ ರಿಂಗ್‍ಟೋನ್‍ನಿಂದ ಕಿರಿಕಿರಿ ಉಂಟಾಗುತ್ತಿದೆ. ಜನ ಆತಂಕಗೊಳ್ಳುತ್ತಿದ್ದಾರೆ. ಜನ ಸಾಮಾನ್ಯರಲ್ಲಿರುವ ಭಯವನ್ನು ಮೊದಲು ಕಡಿಮೆ ಮಾಡಬೇಕಾಗಿದೆ. ಕೊರೊನಾ ವಿಷಯದಲ್ಲಿ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು.

Facebook Comments