ದತ್ತಾತ್ರೇಯ ಪಾಟೀಲ ರೇವೂರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸಿದ್ದರಾಮಯ್ಯ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 29- ಗುಲ್ಬರ್ಗಾ ಜಿಲ್ಲೆಯ ಹಿಂದುಳಿದ ವರ್ಗಗಳ ಅಧಿಕಾರಿ ರಮೇಶ್ ಸಂಗ ಅವರೊಂದಿಗೆ ಅನುಚಿತವಾಗಿ ವರ್ತಿಸಿ ಬೆದರಿಕೆ ಹಾಕಿ ಹಣಕ್ಕಾಗಿ ಒತ್ತಾಯಿಸಿರುವ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸದರಿ ಶಾಸಕರು ಕ್ಷೇತ್ರದ ಜನರಿಗೆ ಆಹಾರದ ಕಿಟ್ ಹಂಚಬೇಕು. ಅದಕ್ಕಾಗಿ ಹಣ ಕೊಡು ಎಂದು ದೂರವಾಣಿಯಲ್ಲಿ ಬೆದರಿಸಿದ್ದಾರೆ. ವರ್ಗಾವಣೆಗಾಗಿ ಹಣ ಕೇಳಿದ್ದಾರೆ. ಇಷ್ಟೇ ಅಲ್ಲದೆ ಅವರ ಬೆಂಬಲಿಗ ಪಾಲಿಕೆಯ ಸದಸ್ಯ ಆದಿಮನಿ ಅಧಿಕಾರಿಯ ಮನೆಗೆ ಹೋಗಿ ಬೆದರಿಕೆ ಹಾಕಿದ್ದಾರೆ.

ಇವರ ವಿರುದ್ಧ ಐಪಿಸಿ 353ರ ಅಡಿ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಕೂಡಲೇ ಇಬ್ಬರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಶಾಸಕರೇ ಮುಂದೆ ನಿಂತು ಈ ರೀತಿಯ ದುಂಡಾವರ್ತನೆ ಮಾಡುವುದು ಸರಿಯಲ್ಲ. ಅಧಿಕಾರಿಗಳು ಮುಕ್ತ ವಾತಾವರಣದಲ್ಲಿ ಕೆಲಸ ಮಾಡಲು ಭಯ ಪಡುವಂತಾಗುತ್ತದೆ.

ಕೂಡಲೇ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕು. ನಾನು ಅಲ್ಲಿನ ಡಿಸಿ ಮತ್ತು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರ ಜತೆಯಲ್ಲೂ ಮಾತನಾಡಿದ್ದೇನೆ. ಶಾಸಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್‍ನ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ. ಗಂಭೀರ ಅಪರಾಧ ಎಸಗಿರುವ ಬಿಜೆಪಿ ಶಾಸಕರನ್ನು ರಕ್ಷಿಸಲಾಗುತ್ತಿದೆ. ಕಾಂಗ್ರೆಸ್ ಇದನ್ನು ಸಹಿಸುವುದಿಲ್ಲ ಎಂದರು.

Facebook Comments