ಪಿಯುಸಿವರೆಗೂ ಆನ್‍ಲೈನ್ ಶಿಕ್ಷಣ ಬೇಡ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ.11- ಪ್ರಾಥಮಿಕ ಶಾಲೆಗಳಲ್ಲಿ ಆನ್‍ಲೈನ್ ಶಿಕ್ಷಣ ರದ್ದುಪಡಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಹೇಳಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪಿಯುಸಿವರೆಗೆ ಆನ್‍ಲೈನ್ ಶಿಕ್ಷಣ ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳಲ್ಲಿ ಪಾಠ ಕಲಿಯುವುದೇ ಬೇರೆ, ಆನ್‍ಲೈನ್ ಶಿಕ್ಷಣವೇ ಬೇರೆ. ಪ್ರಾಥಮಿಕ ಶಾಲೆಗಳಲ್ಲಿ ಆನ್‍ಲೈನ್ ಶಿಕ್ಷಣವನ್ನು ಸರ್ಕಾರ ರದ್ದುಗೊಳಿಸಿದ್ದು ಸೂಕ್ತವಾಗಿದೆ. ಪಿಯುಸಿವರೆಗೂ ಆನ್‍ಲೈನ್ ಶಿಕ್ಷಣವನ್ನು ರದ್ದುಮಾಡಬೇಕು.

ವಿದ್ಯಾರ್ಥಿಗಳು ಶಾಲೆಗಳಲ್ಲೇ ಅಧ್ಯಯನ ಮಾಡಬೇಕು. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಕೊರೊನಾ ಸೋಂಕು ವ್ಯಾಪಿಸುತ್ತಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಶಾಲೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸರ್ಕಾರ ಎಚ್ಚರಿಕೆಯ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳ ಸಂಬಂಧ ಶಿಕ್ಷಣ ಸಚಿವರು ಅಗತ್ಯ ಕ್ರಮ ಕೈಗೊಂಡು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅನುಕೂಲ ಕಲ್ಪಿಸಬೇಕು. ಕೊರೊನಾ ಲಾಕ್‍ಡೌನ್ ಸಂಕಷ್ಟದಲ್ಲಿ ಜನರಿದ್ದಾರೆ. ಶಾಲಾ ಶುಲ್ಕ ಹೆಚ್ಚಳದಿಂದ ಮತ್ತಷ್ಟು ಸಂಕಷ್ಟಗೀಡಾಗಿದ್ದಾರೆ.

ಶುಲ್ಕ ಹೆಚ್ಚಳಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಹೇಳಿದ್ದಾರೆ. ಖಾಸಗಿ ಶಾಲೆಗಳವರು ಈಗಾಗಲೇ ಆನ್‍ಲೈನ್ ಮೂಲಕ ಶಿಕ್ಷಣ ನೀಡುವುದನ್ನು ಆರಂಭಿಸಿದ್ದರು. ಇದಕ್ಕೆ ಸಾರ್ವಜನಿಕವಾಗಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಖಾಸಗಿ ಶಾಲೆಗಳ ಧನದಾಹಕ್ಕೆ ಕಡಿವಾಣ ಹಾಕಬೇಕು.

ಆನ್‍ಲೈನ್ ಮೂಲಕ ಶಿಕ್ಷಣ ಪಡೆಯಲು ಬಡ ಹಾಗೂ ಮಧ್ಯಮ ವರ್ಗದವರಿಗೆ ಸಾಧ್ಯವಾಗುವುದಿಲ್ಲ. ಆನ್‍ಲೈನ್ ಶಿಕ್ಷಣಕ್ಕೆ ಅಗತ್ಯವಾದ ಮೊಬೈಲ್, ಲ್ಯಾಪ್‍ಟಾಪ್, ಕಂಪ್ಯೂಟರ್‍ಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟ್‍ವರ್ಕ್ ಸಿಗುವುದಿಲ್ಲ. ಎಲ್ಲ ಸಂದರ್ಭದಲ್ಲೂ ವಿದ್ಯುತ್ ಇರುವುದಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.

ಇದಲ್ಲದೆ, ಆನ್‍ಲೈನ್ ಶಿಕ್ಷಣದ ನೆಪದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸುಲಿಗೆಗಿಳಿದಿವೆ. ಸರ್ಕಾರ ಶಾಲೆಗಳನ್ನು ಪ್ರಾರಂಭಿಸಲು ಆದೇಶ ಹೊರಡಿಸದಿದ್ದರೂ ಪ್ರವೇಶಾತಿ ಪ್ರಾರಂಭಿಸಿ ಶುಲ್ಕವನ್ನು ವಸೂಲಿ ಮಾಡಲು ಶುರು ಮಾಡಿದ್ದವು.

ಶಾಲಾ ಪ್ರವೇಶಾತಿ ಶುಲ್ಕದ ಜತೆ ಆನ್‍ಲೈನ್ ಶಿಕ್ಷಣದ ಶುಲ್ಕ, ಮಾಸ್ಕ್, ಸ್ಯಾನಿಟೈಜರ್, ಗ್ಲೌಸ್ ಮತ್ತಿತರ ಹೆಚ್ಚುವರಿ ಶುಲ್ಕ ವಸೂಲಿ ಸುಲಿಗೆಗಿಳಿದಿದ್ದವು. ಮೊದಲೇ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದ ಜನ ಖಾಸಗಿ ಶಿಕ್ಷಣ ಸಂಸ್ಥೆಗಳ ಈ ಕ್ರಮದಿಂದ ರೋಸಿ ಹೋಗಿದ್ದರು.

ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಪಕ್ಷಗಳು ಕೂಡ ಆನ್‍ಲೈನ್ ಶಿಕ್ಷಣಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ನಿನ್ನೆ ಸರ್ಕಾರ 1 ರಿಂದ 5ನೆ ತರಗತಿವರೆಗೆ ಆನ್‍ಲೈನ್ ಶಿಕ್ಷಣ ಬೇಡ ಎಂಬ ತೀರ್ಮಾನಕ್ಕೆ ಬಂದಿತ್ತು.

ಇಂದು ಈ ಸಂಬಂಧ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರು ವಿದ್ಯಾರ್ಥಿಗಳು ಶಾಲೆಗೆ ಹೋಗಿಯೇ ಪಾಠ ಕಲಿಯುವುದು ಸೂಕ್ತ. ಆನ್‍ಲೈನ್‍ನಲ್ಲಿ ಪಾಠ ಕಲಿಯುವುದು ಬೇಡ. ತಡವಾದರೂ ಚಿಂತೆಯಿಲ್ಲ, ಆನ್‍ಲೈನ್ ಶಿಕ್ಷಣ ಬೇಡ. ಪ್ರಾಥಮಿಕ ಶಾಲೆಗಳಿಗೆ ಸೀಮಿತಗೊಳಿಸಬೇಡಿ. ಪಿಯುಸಿವರೆಗೂ ಆನ್‍ಲೈನ್ ಶಿಕ್ಷಣ ಬೇಡ ಎಂದು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

Facebook Comments