ಕೋವಿಡ್ ನಿಯಂತ್ರಣ-ಚಿಕಿತ್ಸೆ ಸಾಮಗ್ರಿಗಳ ಖರೀದಿಯಲ್ಲಿ 2,200 ಕೋಟಿ ಭ್ರಷ್ಟಾಚಾರ : ಸಿದ್ದು ಗಂಭೀರ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.3- ಕೋವಿಡ್ ನಿಯಂತ್ರಣಕ್ಕೆ ಮತ್ತು ಚಿಕಿತ್ಸೆಗೆ ಸಾಮಗ್ರಿಗಳ ಖರೀದಿಯಲ್ಲಿ 2200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,

ಕೋವಿಡ್ ಪರಿಕರಗಳ ಖರೀದಿಯಲ್ಲಿ ಮಾರುಕಟ್ಟೆ ಬೆಲೆ 1163.65 ಕೋಟಿ ಇದ್ದರೆ ಸರ್ಕಾರ 3392 ಕೋಟಿ ರೂ. ಖರ್ಚು ಮಾಡಿ ಖರೀದಿ ಮಾಡಿದೆ. ಈ ಮೂಲಕ 2200 ಕೋಟಿ ರೂ. ಹಗರಣ ನಡೆದಿದೆ.

ವೆಂಟಿಲೇಟರ್‍ಗೆ 4 ಲಕ್ಷ ರೂ. ಬೆಲೆ ಇದ್ದರೆ 1 ಸಾವಿರ ವೆಂಟಿಲೇಟರ್ ಖರೀದಿಗೆ 40 ಕೋಟಿ ರೂ. ಖರ್ಚಾಗಬೇಕು 120 ಕೋಟಿ ರೂ. ಖರ್ಚಾಗಿದೆ. ಪಿಪಿಟಿ ಕಿಟ್ ಮಾರುಕಟ್ಟೆಯಲ್ಲಿ 995 ರೂ. ಇದೆ, 4.89 ಲಕ್ಷ ಕಿಟ್ ಖರೀದಿಗೆ 48.65 ಕೋಟಿ ಆಗಬೇಕು, 150 ಕೋಟಿ ರೂ. ಬಿಲ್ ಆಗಿದೆ.

10 ಲಕ್ಷ ಮಾಸ್ಕ್ ಖರೀದಿಗೆ 20 ಕೋಟಿ ಬದಲು 40 ಕೋಟಿ ಎಂದು ಲೆಕ್ಕ ತೋರಿಸಿದರೆ 10 ಲಕ್ಷ ಸರ್ಜಿಕಲ್ ಗ್ಲೌಸ್‍ಗೆ 20 ಕೋಟಿ ರೂ. ಬದಲಿಗೆ 40 ಕೋಟಿ ರೂ. ಬಿಲ್ ಮಾಡಲಾಗಿದೆ.

ಕೋವಿಡ್ ಟೆಸ್ಟ್ ಗ್ಲೌಸ್ 40 ಕೋಟಿ ಬದಲಾಗಿ 65 ಕೋಟಿ ರೂ. ಲೆಕ್ಕ ತೋರಿಸಿದೆ, ಆಮ್ಲಜನಕ ಸಿಲಿಂಡರ್‍ಗೆ 5 ಸಾವಿರ ರೂ. ಮಾರುಕಟ್ಟೆ ಬೆಲೆ ಇದ್ದರೆ 14 ಸಾವಿರ ಬಿಲ್ ಮಾಡಲಾಗಿದೆ. 43 ಕೋಟಿ ರೂ. ಬದಲಿಗೆ 80 ಕೋಟಿ ಬಿಲ್ ಮಾಡಲಾಗಿದೆ ಎಂದು ವಿವರ ನೀಡಿದರು.

6.2 ಲಕ್ಷ ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಪ್ರತಿಯೊಬ್ಬರಿಗೆ 4 ಸಾವಿರದಂತೆ ಲೆಕ್ಕ ಹಾಕಿದರೂ 248 ಕೋಟಿ ಆಗಬೇಕು ಆದರೆ ಸರ್ಕಾರ 5300 ಕೋಟಿ ಖರ್ಚು ಮಾಡಿದೆ, ಸೋಂಕಿತರ ದಿನದ ಖರ್ಚುಗಳನ್ನು ಲೆಕ್ಕ ಹಾಕಿದರೆ 100 ಕೋಟಿ ರೂ. ದಾಟುವುದಿಲ್ಲ ಆದರೆ ಸರ್ಕಾರ 525 ಕೋಟಿ ವೆಚ್ಚ ಮಾಡಿದೆ.

ಹ್ಯಾಂಡ್ ಸ್ಯಾನಿಟೈಸರ್‍ಗೆ 80 ಕೋಟಿ, ಸೋಪು ಖರೀದಿಗೆ 10 ಕೋಟಿ, ಇತರ ಖರ್ಚುಗಳಿಗೆ 1732 ಕೋಟಿ ರೂ. ಲೆಕ್ಕ ತೋರಿಸಿದೆ ಎಂದು ಸಮಗ್ರವಾಗಿ ವಿವರಿಸಿದರು.

ಈ ಮೊತ್ತ ಸಣ್ಣದ್ದಲ್ಲ ರಾಜ್ಯ ಸರ್ಕಾರ ಭಾರೀ ಭ್ರಷ್ಟಾಚಾರ ನಡೆಸಿದೆ, ಇದು ಸೂಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಸೋಂಕು ಆರಂಭವಾದಾಗ ಅಕಾಲಿಕ ಲಾಕ್‍ಡೌನ್ ಮಾಡಿ ಸೋಂಕು ಹೆಚ್ಚಾದಾಗ ಸರ್ಕಾರ ಸುಮ್ಮನಿದೆ, ಲಾಕ್‍ಡೌನ್ ಸಮಯದಲ್ಲಿ ವೈದ್ಯಕೀಯ ಸೌಲಭ್ಯಗಳು ಸೇರಿದಂತೆ ಹಲವಾರು ರೀತಿಯ ಸೌರ್ಕಯಗಳನ್ನು ಹೆಚ್ಚಿಸಿಕೊಳ್ಳಲು ಅವಕಾಶವಿತ್ತು ಆದರೆ ಸರ್ಕಾರ ಏನನ್ನೂ ಮಾಡಲಿಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸರಿಯಾದ ಕ್ರಮಕೈಗೊಂಡಿದ್ದರೆ ಸೋಂಕು ಈ ಮಟ್ಟಕ್ಕೆ ಮುಟ್ಟುತ್ತಿರಲಿಲ್ಲ.

ಸರ್ಕಾರ ಅಮಾನುಷವಾಗಿ ವರ್ತಿಸಿದೆ ಇದಕ್ಕೆ ಬಳ್ಳಾರಿಯಲ್ಲಿ ನಡೆದ ಶವ ಸಂಸ್ಕಾರ ಘಟನೆಗಳೇ ಸಾಕ್ಷಿ. ಯಾರೋ ಕೆಲವರು ಸಿಬ್ಬಂದಿಗಳನ್ನು ಅಮಾನತು ಮಾಡಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸಚಿವರ ನಡುವೆ ಸಮನ್ವಯತೆ ಇಲ್ಲ ಮುಖ್ಯಮಂತ್ರಿ ಅವರ ಕೈಯಲ್ಲಿ ಏನು ಮಾಡಲಾಗುತ್ತಿಲ್ಲ, ಅವರ ಮಾತನ್ನು ಯಾರೂ ಕೇಳುತ್ತಿಲ್ಲ ಮೊದಲು ಕೋವಿಡ್ ಉಸ್ತುವಾರಿಯನ್ನು ಸುಧಾಕರ್‍ಗೆ ನೀಡಲಾಗಿತ್ತು,

ನಂತರ ಶ್ರೀರಾಮುಲುಗೆ ಬದಲಾಯಿಸಲಾಯಿತು, ಅವರಿಬ್ಬರ ಜಗಳದಿಂದಾಗಿ ಸುರೇಶ್‍ಕುಮಾರ್ ಅವರಿಗೆ ವಹಿಸಿದರು. ಈಗ ಅವರೆಲ್ಲರನ್ನೂ ಬದಲಾಯಿಸಿ ಅಶೋಕ್ ಅವರಿಗೆ ಒಪ್ಪಿಸಲಾಗಿದೆ ಎಂದು ಲೇವಡಿ ಮಾಡಿದರು. ಸುಧಾಕರ್ ಅವರು ವೈದ್ಯಕೀಯ ಚಿಕಿತ್ಸೆಯ ಸಾಮಾನ್ಯಜ್ಞಾನ ಹೊಂದಿದ್ದರೆ ಅವರಿಗೆ ಜವಾಬ್ದಾರಿ ಕೊಡಬಹುದಿತ್ತು ಎಂದು ಅಭಿಪ್ರಾಯಪಟ್ಟರು.

ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪರದಾಡುತ್ತಿದ್ದಾರೆ. ಸರ್ಕಾರ ನೀಡುತ್ತಿರುವ ಅಂಕಿ, ಅಂಶಗಳು ಸರಿಯಿಲ್ಲ ಪ್ರತಿ ನಿತ್ಯ ಒಂದಲ್ಲ ಒಂದು ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ ಎಂಬ ವರದಿಗಳಾಗುತ್ತಿವೆ. ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ.

ಈ ಒಂದು ತಿಂಗಳಲ್ಲಿ 40 ಸಾವಿರ ಮಂದಿ ಸೋಂಕಿಗೀಡಾಗಿದ್ದಾರೆ, ಸರ್ಕಾರ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿಲ್ಲ, ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುತ್ತಿದೆ, ಸರ್ಕಾರ ಘೋಷಿತ ಪ್ಯಾಕೇಜ್ ಅನ್ನು ಸರಿಯಾಗಿ ಮುಟ್ಟಿಸುತ್ತಿಲ್ಲ, ಪಿಎಂ ಕೇರ್ ನಿಧಿಗೆ ಎಷ್ಟು ಖರ್ಚಾಗಿದೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿರುವ 290 ಕೋಟಿ ರೂ.ಗಳಲ್ಲಿ ಬಳಕೆಯಾಗಿರುವುದು ಎಷ್ಟು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Facebook Comments