ಒಂದೇ ಹೋಟೆಲ್‍ನಲ್ಲಿದ್ರು ಭೇಟಿಯಾಗದ ಸಿದ್ದು -ಸಿಎಂ, ದೂರವಾಣಿಯಲ್ಲಿ ಚರ್ಚೆ..!

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಮೇ 14- ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಹೇಳಿಕೆಯಿಂದ ಬೇಸರಗೊಂಡಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮಾಧಾನ ಮಾಡುವ ಯತ್ನ ಮಾಡಿದ್ದಾರೆ. ಸಿದ್ದರಾಮಯ್ಯನವರೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿರುವ ಅವರು, ವಿಶ್ವನಾಥ್ ಅವರು ಈ ರೀತಿ ಮಾತನಾಡಬಾರದಿತ್ತು.

ಅವರ ಹೇಳಿಕೆಗೆ ಬೇಸರ ಮಾಡಿಕೊಳ್ಳಬೇಡಿ. ನಾನು ಮಾತನಾಡುತ್ತೇನೆ ಎಂದು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಈ ಇಬ್ಬರು ನಾಯಕರು ಒಂದೇ ಹೋಟೆಲ್‍ನಲ್ಲಿ ಇದ್ದರೂ ಭೈೀಟಿಯಾಗಿರಲಿಲ್ಲ.

ಮೈತ್ರಿ ಸರ್ಕಾರದಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯಕ್ಕೆ ಮತ್ತಷ್ಟು ಪುಷ್ಠಿ ನೀಡಲಾಗುತ್ತಿದೆ ಎಂದೇ ವ್ಯಾಖ್ಯಾನಿಸಲಾಗಿತ್ತಾದರೂ ಎಚ್. ವಿಶ್ವನಾಥ್ ಅವರ ಹೇಳಿಕೆಯಿಂದ ಅಸಮಾಧಾನಗೊಂಡಿದ್ದ ಸಿದ್ದರಾಮಯ್ಯನವರನ್ನು ಫೋನ್‍ನಲ್ಲಿ ಕುಮಾರಸ್ವಾಮಿಯವರು ಸಮಾಧಾನ ಮಾಡಿದ್ದಾರೆ.

ಚಿಂಚೋಳಿ ಉಪಚುನಾವಣೆ ಪ್ರಚಾರಕ್ಕೆ ಕುಮಾರಸ್ವಾಮಿಯವರು ತೆರಳುತ್ತಿದ್ದಾರೆ. ಅದೇ ರೀತಿ ಸಿದ್ದರಾಮಯ್ಯನವರು ಕುಂದಗೋಳಕ್ಕೆ ತೆರಳುತ್ತಿದ್ದಾರೆ. ಹಾಗಾಗಿ ಭೈೀಟಿ ಮಾಡಲು ಸಾಧ್ಯವಾಗಲಿಲ್ಲ.

ಪರಸ್ಪರ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಹಿರಿಯ ನಾಯಕರು ಯಾರೂ ಬೇಸರ ಮಾಡಿಕೊಂಡಿಲ್ಲ. ಎಲ್ಲರೂ ಸೇರಿ ಸಮಾಧಾನ ಮಾಡುವ ಕೆಲಸ ಮಾಡುತ್ತಾರೆ. ಯಾವ ಶಾಸಕರು ಪಕ್ಷ ಬಿಟ್ಟು ತೆರಳುವುದಿಲ್ಲ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ಸ್ಪಷ್ಟನೆ ನೀಡಿದ್ದಾರೆ.

ಕುಂದಗೋಳ ಉಪ ಚುನಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆಯೂ ಕೂಡ ಚರ್ಚೆ ನಡೆಸಿದ್ದಾರೆ. ತಾವು ತಂಗಿದ್ದ ಹೋಟೆಲ್‍ನಲ್ಲಿ ಇಬ್ಬರೂ ಸೇರಿ ಚರ್ಚೆ ನಡೆಸುತ್ತಾರೆ ಎಂದು ತಿಳಿದುಬಂದಿತ್ತು. ಆದರೆ ಕುಮಾರಸ್ವಾಮಿಯವರನ್ನು ಸಿದ್ದರಾಮಯ್ಯ ಭೈೀಟಿ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಫೋನ್ ಮೂಲಕ ಸಮಾಧಾನ ಮಾಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ವಿಶ್ವನಾಥ್ ಅವರು, ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದಿದ್ದರು. ಅವರ ಆಡಳಿತ ವೈಖರಿಯನ್ನು ಟೀಕಿಸಿದ್ದರು. ಅವರನ್ನು ಮತ್ತೆ ಮುಖ್ಯಮಂತ್ರಿ ಎನ್ನುತ್ತಿದ್ದ ಬೆಂಬಲಿಗರನ್ನು ಚಮಚಾಗಿರಿಗಳು ಎಂದು ಹೋಲಿಸಿದ್ದರು. ಇದಕ್ಕೆ ಹಲವು ಸಿದ್ದರಾಮಯ್ಯ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಸಿದ್ದರಾಮಯ್ಯನವರು ಸರಣಿ ಟ್ವಿಟ್ ಮೂಲಕ ತಿರುಗೇಟು ನೀಡಿದ್ದರು.

Facebook Comments