ಬಿಜೆಪಿಗೆ ಸಿದ್ದರಾಮಯ್ಯ ಓಪನ್ ಚಾಲೆಂಜ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.7- ಲಾಕ್‍ಡೌನ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಒಂದು ಕೋಟಿ ರೂ. ದೇಣಿಗೆ ಹಣಕ್ಕೆ ಲೆಕ್ಕ ಕೇಳುತ್ತಿರುವ ಬಿಜೆಪಿ ನಾಯಕರು ಮೊದಲು ಪ್ರಧಾನಿಯವರ ನಿಧಿಗೆ ಬಂದಿರುವ ಹಣದ ಲೆಕ್ಕ ಕೊಡಿಸಲಿ ಎಂದು ಪ್ರತಿಪಕ್ಷದನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಟೀಕೆಗೆ ಟ್ವಿಟರ್‍ನಲ್ಲಿ ಸರಣಿ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ಕಾಂಗ್ರೆಸ್‍ಗೆ ಬಂದಿರುವ ಒಂದು ಕೋಟಿ ರು. ದೇಣಿಗೆಯ ಲೆಕ್ಕವನ್ನು ಕೊಡಲು ನಾವು ಸಿದ್ದ. ಅದೇ ರೀತಿ ಪ್ರತಿಯೊಬ್ಬ ಭಾರತೀಯನ ಖಾತೆಗೆ ನರೇಂದ್ರ ಮೋದಿ ಜಮೆ ಮಾಡಿರುವ 15 ಲಕ್ಷ ರೂ.ಗಳ ಲೆಕ್ಕ ಕೊಡಿ. ಪಿಎಂ ಕೇರ್ಸ್ ನಿಧಿಗೆ ಸಾರ್ವಜನಿಕರಿಂದ ಸಂಗ್ರಹಿಸಿರುವ ದೇಣಿಗೆಯ ಲೆಕ್ಕ ಕೊಡಿ ಎಂದು ಆಗ್ರಹಿಸಿದ್ದಾರೆ.

ಬಿ.ಎಲ್.ಸಂತೋಷ್ ಅವರು ಕೊರೊನಾ ನಿಯಂತ್ರಣಕ್ಕಾಗಿ ಯಡಿಯೂರಪ್ಪ ಅವರಿಗೆ ಶಹಭಾಷ್‍ಗಿರಿ ನೀಡಿದ್ದಾರೆ. ಅದು ನಾಲಿಗೆಯಿಂದ ಬಂದಿದ್ದೋ ಅಥವಾ ಮನಸ್ಸಿನಿಂದ ಬಂದಿದ್ದೋ ಗೊತ್ತಿಲ್ಲ.

ಸಂತೋಷ್ ಅವರು ಆಗಾಗ್ಗೆ ಕರ್ನಾಟಕ್ಕೆ ಬಂದು ಸಹದ್ಯೋಗಿಗಳನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿದರೆ ಬಹುಶಃ ಸಂತೋಷ್ ಅವರಿಗೇ ಶಹಭಾಷ್‍ಗಿರಿ ಸಿಗಲಿದೆ ಎಂದು ಲೇವಡಿ ಮಾಡಿದ್ದಾರೆ.

ಚೀನಾ ಸೇನೆ 2 ಕಿ.ಮೀ ಹಿಂದೆ ಸರಿದಿದೆ ಎಂದು ಹೇಳಿಕೆ ನೀಡಲು ಬಿ.ಎಲ್.ಸಂತೋಷ್ ಅವರೇನು ರಕ್ಷಣಾ ಸಚಿವರೇ, ಸೇನಾ ಮುಖ್ಯಸ್ಥರೇ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಈ ಹೇಳಿಕೆ ನೀಡಬೇಕಾಗಿರುವುದು ಪ್ರಧಾನಿ ನರೇಂದ್ರ ಮೋದಿಯವರು. ಅವರಿಂದ ಹೇಳಿಕೆ ಕೊಡಿಸಿ. ಚೀನಾ ಒಳನುಸುಳಿಲ್ಲ ಎನ್ನುವುದಾದರೆ ಹಿಂದೆ ಸರಿದಿದ್ದು ಎಲ್ಲಿಂದ ಎಂಬುದನ್ನೂ ತಿಳಿಸಲಿ ಎಂದು ಕೆಣಕಿದ್ದಾರೆ.

ಪ್ರತಿಪಕ್ಷದ ನಾಯಕರು ಅಧಿಕಾರಿಗಳ ಸಭೆಯನ್ನೇ ನಡೆಸಿಲ್ಲ ಎಂದು ಆರ್‍ಎಸ್‍ಎಸ್ ನಾಯಕ ಸಂತೋಷ್ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದರೆ ಅಧಿಕಾರಿಗಳ ಸಭೆ ಸೇರಿದಂತೆ ಬಿಜೆಪಿ ಸರ್ಕಾರಕ್ಕೆ ಬುದ್ದಿ ಹೇಳಿ ತಿದ್ದಲು ಏನೆಲ್ಲ ಮಾಡಿದ್ದೇನೆ ಎಂಬ ಬಗ್ಗೆ ವಿವರಣೆ ನೀಡುವುದಾಗಿ ತಿರುಗೇಟು ನೀಡಿದ್ದಾರೆ.

Facebook Comments