ಯಡಿಯೂರಪ್ಪನವರದ್ದು 100 ಪರ್ಸೆಂಟ್ ಭ್ರಷ್ಟ ಸರ್ಕಾರ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.8- ಜನತೆಯ ಕಷ್ಟ ನಷ್ಟಕ್ಕೆ ಕಾರಣವಾಗುವ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳಿಗೆ ಸಹಕರಿಸುವುದು ಕೂಡ ಜನ ದ್ರೋಹವಾಗುತ್ತದೆ. ಹಾಗಾಗಿ ಭ್ರಷ್ಟಚಾರದ ಬಗ್ಗೆ ಧ್ವನಿ ಎತ್ತಲೇಬೇಕಾಯಿತು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ನಡೆದ ಖರೀದಿ ವ್ಯವಹಾರಗಳಲ್ಲಿ 2200 ಕೋಟಿ ರೂಪಾಯಿ ಮೊತ್ತದ ಭಾರೀ ಭ್ರಷ್ಟಚಾರ ನಡೆದಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ ಬೆನ್ನಲ್ಲೇ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.

ಸರ್ಕಾರದ ಮುಖ್ಯಮಂತ್ರಿಯಾಗಿ ಬಹುತೇಕ ಸಚಿವರು ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರಂತೂ ಸರ್ಕಾರಕ್ಕೆ ಕೆಲಸ ಮಾಡಲು ಬಿಡಿ ಎಂದು ಮನವಿ ಮಾಡಿದ್ದಾರೆ.

ತಮ್ಮ ವಿರುದ್ಧ ಕೇಳಿ ಬರುತ್ತಿರುವ ಟೀಕೆಗಳ ಕುರಿತು ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ಸಂಕಷ್ಟ ಕಾಲದಲ್ಲಿ ಸಹಕಾರ ನೀಡುವುದು ವಿರೋಧ ಪಕ್ಷದ ಜವಾಬ್ದಾರಿ ಎಂಬ ಕಾರಣಕ್ಕೆ ಹೆಚ್ಚು ಕಡಿಮೆ ಮೂರು ತಿಂಗಳು ಸರ್ಕಾರದ ಅಕ್ರಮ-ವೈಪಲ್ಯಗಳನ್ನು ಬಹಿರಂಗವಾಗಿ ಪ್ರಶ್ನಿಸದೆ ಪತ್ರಗಳನ್ನಷ್ಟೆ ಬರೆದಿದ್ದೆ. ಮುಖ್ಯಮಂತ್ರಿಯವರು ತಿದ್ದಿಕೊಳ್ಳದಿದ್ದಾಗ ಬಹಿರಂಗವಾಗಿ ಪ್ರಶ್ನಿಸುವುದು ಅನಿವಾರ್ಯವಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ.

ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಜನರ ಪರ, ಸರ್ಕಾರದ ಪರ ಅಲ್ಲ ಎಂದು ಹೇಳಿರುವ ಅವರು, ಯಡಿಯೂರಪ್ಪ ಅವರದು 100 ಪರ್ಸೆಂಟ್ ಭ್ರಷ್ಟ ಸರ್ಕಾರ ಎಂದು ಟೀಕಿಸಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಕ್ಕೆ ಬಂದು ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 10 ಪರ್ಸೆಂಟ್ ಸರ್ಕಾರ ಎಂದು ಟೀಕಿಸಿದ್ದರು. ಈಗ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರದು 100 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದ್ದಾರೆ.

ಕೋವಿಡ್ ನಿಯಂತ್ರಣಕ್ಕಾಗಿ ವೆಂಟಿಲೆಟರ್ ಖರೀದಿಯಲ್ಲಿ ಭ್ರಷ್ಟಚಾರ ಮಾಡದೆ ಸರಿಯಾದ ದರಕ್ಕೆ ವೆಂಟಿಲೆಟರ್ ಖರೀದಿಸಿದ್ದರೆ, ನ್ಯಾಯಯುತ ಬೆಲೆಯಲ್ಲಿ ಇನ್ನಷ್ಟು ವೆಂಟಿಲೆಟರ್ ಖರೀದಿಸಬಹುದಿತ್ತು. ಮತ್ತಷ್ಟು ಜೀವಗಳನ್ನು ಉಳಿಸಬಹುದಿತ್ತು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Facebook Comments