ಗಲಭೆ ನಡೆದಿದ್ದ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿಗೆ ಸಿದ್ದರಾಮಯ್ಯ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.2-ಪ್ರವಾದಿ ಮೊಹಮ್ಮದ್ ಅವರ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್‍ನನ್ನು ತಕ್ಷಣ ಬಂಧಿಸಿ ಗುಂಪು ಸೇರಿದ್ದವರಿಗೆ ಮಾಹಿತಿ ತಿಳಿಸಿದ್ದರೆ ಗಲಭೆಯ ಪ್ರಮಾಣ ಹೆಚ್ಚಾಗುತ್ತಿರಲಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಜಿಹಳ್ಳಿ, ಡಿಜೆಹಳ್ಳಿ ಗಲಭೆಪೀಡಿತ ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಸಿದ್ದರಾಮಯ್ಯನವರು, ಶಾಸಕ ಶ್ರೀನಿವಾಸಮೂರ್ತಿ ಅವರ ಸುಟ್ಟು ಹೋದ ಮನೆಯನ್ನು ಪರಿಶೀಲನೆ ಮಾಡಿದರು.

ಹಾಗೇ ಗಲಭೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳನ್ನು ಕೂಡ ವೀಕ್ಷಣೆ ಮಾಡಿದರು.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿ ನವೀನ್ ಸಂಜೆ 6 ಗಂಟೆಗೆ ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಪೋಸ್ಟ್ ಹಾಕುತ್ತಾನೆ.

7.45ಕ್ಕೆ ಆತನ ವಿರುದ್ಧ ಒಬ್ಬರು ದೂರು ನೀಡಲು ಠಾಣೆಯ ಒಳಗೆ ಬರುತ್ತಾರೆ. ತಕ್ಷಣ ಎಫ್‍ಐಆರ್ ದಾಖಲಾಗುತ್ತದೆ. ಆ ವೇಳೆ ಠಾಣೆಯಲ್ಲಿ ಎಸ್‍ಎಚ್‍ಒ ಮಾತ್ರ ಇರುತ್ತಾರೆ. 8.30ರ ಸುಮಾರಿಗೆ ಡಿಸಿಪಿ ಬರುತ್ತಾರೆ, ಈ ನಡುವೆ ಗುಂಪು ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆಗೆ ಬೆಂಕಿ ಹಚ್ಚುತ್ತದೆ.

ಆ ಸಂದರ್ಭದಲ್ಲಿ ನವೀನ್ ಆತನ ಮನೆಯಲ್ಲೇ ಇದ್ದುದ್ದಾಗಿಪೊಲೀಸರೇ ಹೇಳುತ್ತಿದ್ದಾರೆ. ತಕ್ಷಣವೇ ಆರೋಪಿಯನ್ನು ಬಂಧಿಸಿರುವ ಸುದ್ದಿಯನ್ನು ಗುಂಪು ಸೇರಿದವರಿಗೆ ಹೇಳಿದ್ದರೆ ಗಲಭೆ ಹೆಚ್ಚಾಗುತ್ತಿರಲಿಲ್ಲ.

ಪೊಲೀಸರು ಹೇಳುವ ಪ್ರಕಾರ ಆರೋಪಿ ನವೀನ್‍ನನ್ನು ಬಂಧಿಸಲಾಗಿತ್ತು. ಆದರೆ ಹೆಚ್ಚು ಜನ ಗುಂಪು ಸೇರಿದ್ದರಿಂದ ಹೊರಗೆ ಕರೆದುಕೊಂಡು ಬರಲಾಗಲಿಲ್ಲ. ರಾತ್ರಿ 3 ಗಂಟೆಗೆ ಠಾಣೆಗೆ ಕರೆತರಲಾಯಿತು ಎಂಬ ಮಾಹಿತಿ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

ಗಲಭೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ಮುಲಾಜು ನೋಡಬಾರದು. ಯಾರ ವಿರುದ್ಧ ಸಾಕ್ಷ್ಯಗಳಿವೆಯೋ ಅಂಥವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು.

ಈವರೆಗೂ 387 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರಲ್ಲೂ ಕೆಲವರು ಅಮಾಯಕರಿದ್ದಾರೆ ಎಂದು ಶಾಸಕ ರಿಜ್ವಾನ್ ಅರ್ಷದ್ ಸೇರಿ ಬಹಳಷ್ಟು ಮಂದಿ ಹೇಳುತ್ತಿದ್ದಾರೆ. ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂಬುದು ಎಷ್ಟು ಸತ್ಯವೋ ಅಮಾಯಕರಿಗೆ ತೊಂದರೆಯಾಗಬಾರದು ಎಂಬುದು ಅಷ್ಟೇ ನಿಜ ಎಂದು ಹೇಳಿದರು.

ಘಟನೆಯ ಬಗ್ಗೆ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಂಗ ತನಿಖೆ ನಡೆಸಬೇಕೆಂದು ನಾವು ಒತ್ತಾಯ ಮಾಡಿದ್ದೆವು. ಆದರೆ ಸರ್ಕಾರ ಮ್ಯಾಜಿಸ್ಟ್ರೇಟ್ ವಿಚಾರಣೆಗೆ ಆದೇಶ ಮಾಡಿದೆ. ನಿಷ್ಪಕ್ಷಪಾತ ತನಿಖೆ ನಡೆಯಬೇಕು.

ಗುಂಡೇಟಿನಿಂದ ನಾಲ್ಕು ಮಂದಿ ಸತ್ತಿದ್ದಾರೆ. ಸರ್ಕಾರ ಯಾವುದೇ ಪೂರ್ವಗ್ರಹಪೀಡಿತವಿಲ್ಲದೆ ತನಿಖೆ ನಡೆಸಬೇಕು ಎಂದರು. ತನಿಖೆ ಈಗ ಆರಂಭಿಕ ಹಂತದಲ್ಲಿದೆ. ಈ ಸಂದರ್ಭದಲ್ಲಿ ನಾವು ಯಾವುದೇ ವ್ಯಕ್ತಿಗೆ ಅಥವಾ ಪಕ್ಷದ ಮೇಲೆ ಆರೋಪ ಮಾಡಲು ಬಯಸುವುದಿಲ್ಲ.

ರಾಜ್ಯದ ಗೃಹ ಸಚಿವರು ತನಿಖೆಗೆ ಮೊದಲೇ ಕೆಲವರ ಹೆಸರನ್ನು ಹೇಳಿದ್ದಾರೆ. ಆದರೆ ನಾವು ಆ ರೀತಿ ಮಾಡುವುದಿಲ್ಲ. ತನಿಖೆ ನಡೆದು ಸತ್ಯಾಂಶ ಬಯಲಾಗಲಿ ಎಂದು ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ಡಿಸಿಪಿ ಶರಣಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಶಾಸಕರಾದ ಅಖಂಡ ಶ್ರೀನಿವಾಸ್, ರಿಜ್ವಾನ್ ಅರ್ಷದ್, ನಜೀರ್ ಅಹಮ್ಮದ್, ಶಾಸಕ ವೆಂಕಟರಮಣಪ್ಪ, ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments