ರಾಜ್ಯದ ಹಿತರಕ್ಷಣೆಗಾಗಿ ಪ್ರಧಾನಿ ಬಳಿ ಕಡಕ್ ಆಗಿ ಮಾತನಾಡಿ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಸೆ.18- ಕೊರೊನಾ ಸಾಮಾಗ್ರಿಗಳ ಖರೀದಿಯನ್ನು ಕೇಂದ್ರ ಸರ್ಕಾರ ಕೇಂದ್ರೀಕೃತಗೊಳಿಸಿದೆ. ಹೀಗಾಗಿ ರಾಜ್ಯಕ್ಕೆ ಅಗತ್ಯದಷ್ಟು ವೆಂಟಿಲೇಟರ್ ಮತ್ತು ಆಮ್ಲಜನಕ ಪೂರೈಕೆಯಾಗದೆ ಜನ ಸಾಯುತ್ತಿರುವುದನ್ನು ಪ್ರಧಾನ ಮಂತ್ರಿ ಅವರ ಗಮನಕ್ಕೆ ತಂದು ಕಣ್ಣು ತೆರೆಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಅವರು ಕಾಡಿಬೇಡಿ ಕೊನೆಗೂ ಪ್ರಧಾನಿ ಅವರ ಭೇಟಿಗೆ ಅವಕಾಶ ಪಡೆದಿದ್ದಾರೆ.

ಈ ಅವಕಾಶವನ್ನು ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ ಬಳಸಿಕೊಳ್ಳದೆ ರಾಜ್ಯದ ಹಿತರಕ್ಷಣೆಗಾಗಿ ನಾಲ್ಕು ಮಾತುಗಳನ್ನು ಕಡಕ್ ಆಗಿ ಕೇಳಲು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ರಾಜ್ಯದ ಜನ ನಿಮ್ಮ ಬೆನ್ನ ಹಿಂದಿದ್ದಾರೆ. ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಣದ ಸಾಮಗ್ರಿಗಳ ಖರೀದಿಯನ್ನು ಕೇಂದ್ರೀಕೃತಗೊಳಿಸಿದೆ.

ಕರ್ನಾಟಕದ ಬೇಡಿಕೆಯ ಶೇಕಡಾ ಹತ್ತರಷ್ಟನ್ನು ಪೂರೈಸಿಲ್ಲ. ಜನ ಸಾಯುತ್ತಿದ್ದಾರೆ. ಈ ವಿಷಯವನ್ನು ಪ್ರಧಾನಿ ಅವರಿಗೆ ಧೈರ್ಯವಾಗಿ ಹೇಳಿ ಕಣ್ಣು ತೆರೆಸಿ ಎಂದಿದ್ದಾರೆ. ಕಳೆದ ವರ್ಷದ ಅತಿವೃಷ್ಟಿಗೆ ರೂ.35000 ಕೋಟಿ ಪರಿಹಾರ ಕೇಳಲಾಗಿತ್ತು, ಆದರೆ ಕೇಂದ್ರ ಸರ್ಕಾರ ನೀಡಿದ್ದು ರೂ.1,869 ಕೋಟಿ ರೂ.ಮಾತ್ರ.

ಈ ಬಾರಿ 8 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷದ ಬಾಕಿ ಜೊತೆ ಈ ವರ್ಷದ ಪರಿಹಾರವನ್ನು ಉದಾರವಾಗಿ ಕೊಡುವಂತೆ ಒತ್ತಾಯಿಸಬೇಕು ಎಂದು ಹೇಳಿದ್ದಾರೆ. 15ನೇ ಹಣಕಾಸು ಆಯೋಗದಿಂದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚು ನಷ್ಟವಾಗಿರುವುದು ಕರ್ನಾಟಕ ರಾಜ್ಯಕ್ಕೆ. ಈ ಅನ್ಯಾಯಕ್ಕೆ ಕಾರಣವಾಗಿರುವ ಮಾನದಂಡಗಳನ್ನು ಪರಿಷ್ಕರಿಸಿ ತೆರಿಗೆ ಹಂಚಿಕೆ ಮತ್ತು ಎಸ್‍ಡಿ ಆರ್‍ಎಫ್‍ನಲ್ಲಿ ರಾಜ್ಯಕ್ಕೆ ನ್ಯಾಯಬದ್ದ ಪಾಲು ಸಿಗುವಂತೆ ಮಾಡಿ ಎಂದು ಆಗ್ರಹಿಸಿದ್ದಾರೆ.

ಕೊರೊನಾ ಸೋಂಕಿನಲ್ಲಿ ವಿಶ್ವದಲ್ಲಿ ಭಾರತ ಮತ್ತು ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಗೆಲುವಿನ ಕಿರೀಟಗಳನ್ನೆಲ್ಲ ಮುಡಿಗೇರಿಸುವ ಪ್ರಧಾನ ಮಂತ್ರಿ ಅವರು ವೈಫಲ್ಯಗಳನ್ನು ರಾಜ್ಯಗಳ ಹೆಗಲಿಗೆ ಹೋರಿಸಿ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಾರೆ. ಪ್ರಧಾನಿ ಅವರಿಗೆ ಅವರು ನಿಭಾಯಿಸಬೇಕಾದ ಜವಾಬ್ದಾರಿಯನ್ನು ನೆನಪಿಸಿ, ಕರ್ನಾಟಕಕ್ಕೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್‍ನ ಪಾಲು ರಾಜ್ಯದ ಜನರನ್ನು ಇನ್ನೂ ತಲುಪಿಲ್ಲ. ಕೊರೊನಾ ಸೋಂಕಿಗಿಂತ ಹಸಿವು ಮತ್ತು ನಿರುದ್ಯೋಗದಿಂದ ಹೆಚ್ಚು ಜನ ಸಾಯುತ್ತಿದ್ದಾರ, ನೋವು ಅನುಭವಿಸುತ್ತಿದ್ದಾರೆ. ಮೊದಲು, ಪ್ಯಾಕೇಜ್‍ನಲ್ಲಿ ರಾಜ್ಯಕ್ಕೆ ನ್ಯಾಯಬದ್ಧ ಪಾಲು ನೀಡಲು ಒತ್ತಾಯಿಸಿ ಎಂದು ಯಡಿಯೂರಪ್ಪ ಅವರಿಗೆ ಒತ್ತಾಯಿಸಿದ್ದಾರೆ.

ರಾಜ್ಯಕ್ಕೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ಜಿಎಸ್‍ಟಿ ಪರಿಹಾರದ ಮೊತ್ತ 25,508 ಕೋಟಿ ರೂಗಳಾಗಿದೆ. ಅದನ್ನು ನೀಡದೆ ಪ್ರಧಾನಿ ಅವರು ದ್ರೋಹ ಬಗೆದಿದ್ದಾರೆ. ಸಾಲ ಎತ್ತಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಗೆ ಭಿಕ್ಷಾಪಾತ್ರೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಯಡಿಯೂರಪ್ಪ ಅವರು ನಿಮ್ಮ ನಾಯಕರ ಎದೆಯಳತೆಯ ಮುಂದೆ ಮಣಿಯದೆ ಧೈರ್ಯದಿಂದ ಕರ್ನಾಟಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಒತ್ತಡ ತನ್ನಿ ಎಂದಿದ್ದಾರೆ.

Facebook Comments