ವಿಧಾನಸಭೆಯಲ್ಲಿ ಪ್ರತಿ ಧ್ವನಿಸಿದ ವೈದ್ಯಕೀಯ ಸಾಮಗ್ರಿ ಖರೀದಿ ಅವ್ಯವಹಾರ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.22-ಕೊರೊನಾ ನಿಯಂತ್ರಣ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಹಾಗೂ ವೈದ್ಯಕೀಯ ಉಪಕರಣ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪದ ಪ್ರಕರಣ ವಿಧಾನಸಭೆಯಲ್ಲಿಂದು ಪ್ರತಿ ಧ್ವನಿಸಿತು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾಪಿಸಲು ನೀಡಿದ್ದ ನೋಟಿಸನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿಯಮ 69ಕ್ಕೆ ಬದಲಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ಟರು.

ವಿಷಯದ ಗಂಭೀರತೆಯನ್ನು ಅರಿತು ನಿಲುವಳಿ ಸೂಚನೆಯನ್ನು ಪರಿವರ್ತಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ. ಎರಡು ಗಂಟೆಯೊಳಗೆ ಚರ್ಚೆ ಮುಗಿಸಬೇಕು. ಸರ್ಕಾರವು ಆನಂತರ ಉತ್ತರ ಕೊಡಲಿದೆ ಎಂದರು. ಕೊರೊನಾ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಮತ್ತು ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಾಗಿದೆ. ನ್ಯಾಯಾಲಯದ ಕಲಾಪಕ್ಕೆ ತೊಂದರೆಯಾಗದಂತೆ ಚರ್ಚೆ ಮಾಡಬೇಕೆಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ, ಕೊರೊನಾದಂತಹ ಗಂಭೀರ ವಿಚಾರದ ಬಗ್ಗೆ ಚರ್ಚಿಸಲು ಎರಡು ಗಂಟೆ ಸಮಯ ಸಾಲುವುದಿಲ್ಲ. ವಿರೋಧ ಪಕ್ಷದ ನಾಯಕರೇ ಸುಮಾರು ಎರಡು ಗಂಟೆ ಮಾತನಾಡಬಹುದು. ಎಷ್ಟು ಜನ ಮಾತನಾಡಲು ಸಾಧ್ಯ ? ಕನಿಷ್ಟ ನಾಲ್ಕೈದು ಜನರಾದರೂ ಮಾತನಾಡಬೇಕು. ಹೆಚ್ಚು ಸಮಯ ನೀಡಿ ಎಂದು ಮನವಿ ಮಾಡಿದರು.

ನಂತರ ಸಿದ್ದರಾಮಯ್ಯ ಅವರು ಚರ್ಚೆ ಆರಂಭಿಸಿ, ನಿಲುವಳಿ ಸೂಚನೆ (ನಿಯಮ 60ರಡಿ) ಚರ್ಚೆಗೆ ಅವಕಾಶ ಕೊಡುವಂತೆ ನಾವು ನೋಟಿಸ್ ನೀಡಿದ್ದೆವು. ಆದರೆ, ಸಭಾಧ್ಯಕ್ಷರು ಯಾವುದೇ ಪೂರ್ವಭಾವಿ ಪ್ರಸ್ತಾಪವಿಲ್ಲದೆ ನಿಯಮ 69ರಡಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿರುವುದು ವಿಷಯದ ಗಂಭೀರತೆ ಸಭಾಧ್ಯಕ್ಷರಿಗೆ ಮನದಟ್ಟಾಗಿದೆ ಎಂದು ಭಾವಿಸುತ್ತೇನೆ ಎಂದರು.

ಕೊರೊನಾ ವೈರಾಣು ಸೋಂಕು ಹರಡುತ್ತಿರುವ ವಿಚಾರ ಗಂಭೀರವಾದದ್ದು, ಅದರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಬಹಳಷ್ಟು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಸೋಂಕಿನಿಂದ ಹಲವು ಮಂದಿ ಮೃತಪಟ್ಟಿದ್ದಾರೆ, ಇನ್ನು ಕೆಲವರು ಕ್ವಾರಂಟೈನಲ್ಲಿದ್ದಾರೆ ಎಂದು ಚರ್ಚೆಯನ್ನು ಮುಂದುವರೆಸಿದರು.

Facebook Comments