ಲಜ್ಜೆಗೆಟ್ಟ ಇವರು ರಾಜಕೀಯದಲ್ಲಿ ಹೇಗೆ ಇರುತ್ತಾರೋ : ಮುನಿರತ್ನ ವಿರುದ್ಧ ಹರಿಹಾಯ್ದ ಸಿದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.27- ಮುನಿರತ್ನ ನಾಯ್ಡು 25-30 ಕೋಟಿ ರೂಪಾಯಿ ವ್ಯವಹಾರ ಮಾಡಿಕೊಂಡು ಕಾಂಗ್ರೆಸ್ ಪಕ್ಷದಿಂದ ಕದ್ದು ಓಡಿ ಹೋಗಿದ್ದರಿಂದ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಉಪಚುನಾವಣೆ ಬಂದಿದೆ ಎಂದು ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಉಪಚುನಾವಣೆ ನಡೆಯುತ್ತಿರುವ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜೆ.ಪಿ.ಪಾರ್ಕ್ ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ರೋಡ್ ಶೋ ಮೂಲಕ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋದವರ ವಿರುದ್ದ ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಮುನಿರತ್ನ ನಾಯ್ಡುನನ್ನು ಬೆಳೆಸಿತ್ತು, ಬಿಬಿಎಂಪಿ ಸದಸ್ಯನಾಗಿ, ಶಾಸಕನಾಗಿ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ಪಡೆದ ಮುನಿರತ್ನ ನಾಯ್ಡು, ಪಕ್ಷಕ್ಕೆ ದ್ರೋಹ ಮಾಡಿ, ಮತ ಹಾಕಿದ ಜನರ ನಂಬಿಕೆಗೆ ಮೋಸ ಮಾಡಿ ಬಿಜೆಪಿಗೆ ಸೇರಿದ್ದಾರೆ. ಅದು ಸುಮ್ಮನೆ ಹೋಗಿಲ್ಲ. 25 ಕೋಟಿ ರೂಪಾಯಿ ವ್ಯವಹಾರ ಮಾಡಿಕೊಂಡಿದ್ದಾರೆ, ಅದೆಲ್ಲದಕ್ಕೂ ಸಾಕ್ಷ್ಯ ಇದೆ, ಅವರ ಮಾತುಕತೆಗಳು ರೆಕಾರ್ಡ್ ಆಗಿವೆ. ಈಗ ಉಪ ಚುನಾವಣೆಗೆ ಬಿಜೆಪಿ ಮತ್ತೆ 25 ಕೋಟಿ ರೂಪಾಯಿ ನೀಡಿದೆ ಎಂದು ಗಂಭೀರ ಆರೋಪ ಮಾಡಿದರು. ಇದು ಸಾಮಾನ್ಯ ಚುನಾವಣೆ ಅಲ್ಲ.

ಈ ಉಪಚುನಾ ವಣೆ ಯಾಕೆ ಬಂತು ಎಂದು ಎಲ್ಲರಿಗೂ ಗೊತ್ತಿದೆ. ಮುನಿರತ್ನ ನಾಯ್ಡುರನ್ನು ನಾವೇನು ಕತ್ತು ಹಿಡಿದು ಆಚೆ ತಳ್ಳಿರಲಿಲ್ಲ. ಜನರ ನಂಬಿಕೆಗೆ ಮೋಸ ಮಾಡಿದ ಆತನಿಗೆ ಮತ್ತೆ ಮತ ಹಾಕುತ್ತಿರಾ… ಆತನಿಗೆ ಈಗ ತಕ್ಕ ಪಾಠ ಕಲಿಸಲು ಜನರಿಗೆ ಈಗೊಂದು ಅವಕಾಶ ಸಿಕ್ಕಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಿ. ನವೆಂಬರ್ 3ರಂದು ನಡೆಯುವ ಚುನಾವಣೆಯಲ್ಲಿ ಕ್ರಮ ಸಂಖ್ಯೆ 1ರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾರಿಗೆ ಮತ ಚಲಾವಣೆ ಮಾಡಿ ಎಂದು ಕರೆ ನೀಡಿದರು.

ಮುನಿರತ್ನ ನಾಯ್ಡು ಅಭಿವೃದ್ಧಿ ಮಾಡಿದೆ ಎಂದು ಹೇಳಿಕೊಳ್ಳುತ್ತಾರೆ. ನಾನು ಸಿಎಂ ಆಗಿದ್ದಾಗ ಈ ಕ್ಷೇತ್ರಕ್ಕೆ 2 ಸಾವಿರ ಕೋಟಿ ಅನುದಾನ ಕೊಟ್ಟಿದ್ದೆ. ನಾನು ಅನುದಾನ ಕೊಡದೆ ಇದ್ದರೆ ಮುನಿರತ್ನನಾಯ್ಡು ಮನೆಯಿಂದ ಹಣ ತಂದು ಅಭಿವೃದ್ಧಿ ಮಾಡುತ್ತಿದ್ದರಾ ಎಂದು ಪ್ರಶ್ನಿಸಿದರು. ನಾನು ಅಧಿಕಾರದಲ್ಲಿದ್ದಾಗ ಅನುದಾನ ಪಡೆಯಲು ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್, ಮುನಿರತ್ನನಾಯ್ಡುಗೆ ಅವರ ನಡುವೆ ಪೈಪೋಟಿ ಇತ್ತು.

ಈ ಮೂವರು ಮತ್ತು ಡಾ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ಅವರುಗಳು ದಿನ ಬೆಳಗಾದರೆ ನನ್ನ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಬೆಳಗ್ಗೆಯೂ ಇವರದೆ ಮೊದಲ ಮುಖ, ರಾತ್ರಿಯೂ ಇವರದೆ ಕೊನೆಯ ಮುಖ ಎಂಬಂತಾಗಿತ್ತು. ಇವರೆಲ್ಲಾ ಬಿಜೆಪಿಗೆ ಹೋಗಿದ್ದರಿಂದ ನನಗೆ ಕೆಟ್ಟ ಹೆಸರು ಬಂತು ಎಂದು ವಿಷಾದಿಸಿದರು. ಲಜ್ಜೆ ಗೆಟ್ಟ ಇವರು ರಾಜಕೀಯದಲ್ಲಿ ಹೇಗೆ ಇರುತ್ತಾರೋ, ಮತ್ತೆ ನಿಮ್ಮ ಹತ್ತಿರ ಯಾವ ಮುಖ ಇಟ್ಟುಕೊಂಡು ಬಂದು ಮತ ಕೇಳುತ್ತಾರೋ ಗೊತ್ತಿಲ್ಲ. ಮುನಿರತ್ನ ನಾಯ್ಡುಗೆ ಪಾಠ ಕಲಿಸಲು ಇದು ಉತ್ತಮ ಅವಕಾಶ ಯೋಚಿಸಿ ಮತ ಚಲಾಯಿಸಿ ಎಂದು ಹೇಳಿದರು. ನಮ್ಮ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿತ್ತು, ಯಡಿಯೂರಪ್ಪ ಸರ್ಕಾರದ ಒಂದೇ ಒಂದು ಹೊಸ ಯೋಜನೆ ಹೆಸರು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ನಾವು ಏಳು ಕೆ.ಜಿ. ಅಕ್ಕಿ ಕೊಡುತ್ತಿದ್ದೇವು. ಯಡಿಯೂರಪ್ಪ ಅದನ್ನು ನಾಲ್ಕು ಕೆಜಿ ಕಡಿತ ಮಾಡಿದ್ದಾರೆ. ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ, ಮತ್ತೆ 10 ಕೆಜಿ ಕ್ಕಿ ಕೊಡುತ್ತೇವೆ. ಏಳು ಕೆಜಿ ಅಕ್ಕಿಗೆ ಯಡಿಯೂರಪ್ಪ ಅವರಪ್ಪನ ಮನೆಯಿಂದ ದುಡ್ಡುಕೊಡುತ್ತಿದ್ದಿದ್ದರಾ. ನಾನು ಕೂಡ ನಮ್ಮ ಮನೆ ಹಣ ತಂದು ಕೊಡುತ್ತಿರಲಿಲ್ಲ. ಜನರ ದುಡ್ಡು, ಅದನ್ನು ಜನರಿಗೆ ಬಳಸಬೇಕು ಎಂದು ಹೇಳಿದರು.

ಬಿಜೆಪಿ ಸರ್ಕಾರ ದಿವಾಳಿಯಾಗಿದೆ. ಸಂಬಳ ಕೊಡಲು ದುಡ್ಡಿಲ್ಲ. ವಿಧವಾ ವೇತನ, ವೃದ್ಧಾಪ್ಯ ವೇತನ ಸೇರಿ ಸಾಮಾಜಿಕ ಪಿಂಚಣಿಗಳನ್ನು ಏಳು ತಿಂಗಳಿಂದ ಕೊಟ್ಟಿಲ್ಲ. ಕೊರೊನಾದಂತಹ ಸಂಕಷ್ಟ ಕಾಲದಲ್ಲೂ ಹಣ ಲೂಟಿ ಮಾಡಿದರು. ಚಾಲಕರಿಗೆ, ಕುಶಲ ಕರ್ಮಿಗಳಿಗೆ ನೆರವು ನೀಡುವುದಾಗಿ ಘೋಷಿಸಿದರು. ಆದರೆ ಹಣ ಕೊಡಲಿಲ್ಲ. ಯಡಿಯೂರಪ್ಪ ಮೋಸಗಾರ, ಲೂಟಿಕೋರ ಎಂದರಲ್ಲದೆ, ಯಡಿಯೂರಪ್ಪ ಅವರ ಮಗ ಆರ್‍ಟಿಜಿಎಸ್ ಮೂಲಕ ಲಂಚ ಪಡೆಯುತ್ತಾನೆ ಎಂದು ಕಿಡಿಕಾರಿದರು.

ಇನ್ನೂ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಸುಳ್ಳುಗಾರ. ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಕೊಡುವುದಾಗಿ ಭರವಸೆ ನೀಡಿದ್ದರು, ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು, ಈಗ ಪಕೋಡಾ ಮಾರಿ ಎನ್ನುತ್ತಾರೆ, ಮಾರಕ ಕಾನೂನು ತಂದು ರೈತರ ಮನೆ ಹಾಳು ಮಾಡಿದರು ಎಂದು ಆರೋಪಿಸಿದರು.
ಜೆಡಿಎಸ್ ಬಗ್ಗೆ ಮಾತನಾಡಲ್ಲ. ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಜೀವನದಲ್ಲಿ ನೊಂದಿದ್ದಾರೆ. ನೊಂದ ಹೃದಯಕ್ಕೆ ಸಮಾದಾನ ಸಿಗಬೇಕಾದರೆ ಕುಸುಮಾರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಡಿ.ಕೆ.ಸುರೇಶ್, ಶಾಸಕ ಭೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಎಂ.ನಾರಾಯಣ ಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ರಿಜ್ವಾನ್ ಅರ್ಹದ್, ಮಾಜಿ ಶಾಸಕ ಆರ್.ವಿ.ದೇವರಾಜ್ ಮತ್ತಿತರರು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

Facebook Comments