ಟಿ.ಬಿ.ಜಯಚಂದ್ರ ಮುದಿ ಎತ್ತಾದರೆ, ಬಿಎಸ್ವೈ- ಮೋದಿ ಎಳೆ ಎತ್ತುಗಳಾ..? : ಸಿದ್ದು ಗುದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ. 28- ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರನ್ನು ಬಿಜೆಪಿಯವರು ಮುದಿ ಎತ್ತು ಎಂದು ಟೀಕಿಸಿದ್ದಾರೆ. ಹಾಗಿದ್ದರೆ ಯಡಿಯೂರಪ್ಪ, ನರೇಂದ್ರ ಮೋದಿ ಅವರು ಎಳೆಯ ಎತ್ತುಗಳೇ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿಯವರು ಟೀಕೆ ಮಾಡುವ ಮೊದಲು ತಮ್ಮನ್ನು ತಾವು ನೋಡಿಕೊಳ್ಳಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರಧಾನಮಂತ್ರಿ ನರೇಂದ್ರ ಮೋದಿ, ಜೆಡಿಎಸ್‍ನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರುಗಳೆಲ್ಲಾ ಎಳೆಯ ಎತ್ತುಗಳೇ ? ಎರಡು ಹಲ್ಲಿನವೇ ಎಂದು ಪ್ರಶ್ನಿಸಿದರು.

ನಿನ್ನೆ ಸಂಜೆ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕೊನೆಯ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಬಿಬಿಎಂಪಿಯ ಮಾಜಿ ಸದಸ್ಯ ಜಿ.ಕೆ.ವೆಂಕಟೇಶ್ ಎಂಬಾತ ಸ್ಥಳಕ್ಕೆ ಬಂದು ಬಿಜೆಪಿ ಪರವಾದ ಘೋಷಣೆಗಳನ್ನು ಕೂಗಿದ್ದಾನೆ. ನಮ್ಮ ಕಾರ್ಯಕರ್ತರು ಆತನನ್ನು ಓಡಿಸಿದರು.

ಆನಂತರ ಮುಂದೆ ಹೋಗಿ 30-40 ಜನ ಸೇರಿಕೊಂಡು ನಾನು ಹೋಗುವ ದಾರಿಯಲ್ಲೇ ಅಡ್ಡಲಾಗಿ ರಸ್ತೆಯಲ್ಲಿ ಧರಣಿ ಕುಳಿತಿದ್ದರು. ಪೊಲೀಸರು ನನ್ನನ್ನು ವಾಪಸ್ ಹೋಗಬೇಕು ಎಂದು ಹೇಳಿದಾಗ ನಾನು ಒಪ್ಪಲಿಲ್ಲ. ಕೊನೆಗೆ ನಾನು ಅದೇ ದಾರಿಯಲ್ಲಿ ಬಂದೆ ಎಂದರು.

ನಿನ್ನೆ ಮಧ್ಯಾಹ್ನವೂ ಕೂಡ ನಾವು ಹಾದು ಹೋಗುವ ದಾರಿಯಲ್ಲಿ ಬಿಜೆಪಿಯವರು ಮೋದಿ ಎಂದು ಘೋಷಣೆ ಕೂಗುತ್ತಿದ್ದರು. ಸಂಜೆ ಸಭೆ ವೇಳೆಯಲ್ಲಿ ಹೆಚ್ಚಿನ ಪೆÇಲೀಸರು ಇರಲಿಲ್ಲ. ಮೂರ್ನಾಲ್ಕು ಮಂದಿ ಸಿಬ್ಬಂದಿ ಹಾಗೂ ಒಬ್ಬ ಇನ್ಸ್‍ಪೆಕ್ಟರ್ ಮಾತ್ರ ಇದ್ದರು. ಗಲಾಟೆ ಆದ ಮೇಲೆ ಮಹಿಳಾ ಎಸಿಪಿಯೊಬ್ಬರು ಸ್ಥಳಕ್ಕೆ ಬಂದರು. ತದನಂತರ ಡಿಸಿಪಿಯವರೂ ಬಂದರು. ಒಟ್ಟಾರೆ ಪೊಲೀಸರ ನಿಷ್ಕ್ರಿಯತೆ ಎದ್ದುಕಾಣುತ್ತಿತ್ತು ಎಂದು ಆರೋಪಿಸಿದರು.

ಪ್ರಚಾರಕ್ಕೆ ಅಡ್ಡಿಪಡಿಸುವ ಮೂಲಕ ನಮ್ಮ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿಯವರ ಪ್ರಚಾರಕ್ಕೆ ಅಡ್ಡಿ ಪಡಿಸಿದೆವು ಎಂದು ಹೇಳಿಕೊಳ್ಳುವ ಉತ್ಸಾಹ ಅವರದ್ದು. ನಿನ್ನೆಯ ಘಟನೆಯ ಬಳಿಕ ಎಫ್‍ಐಆರ್ ದಾಖಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರು ಬಿಜೆಪಿ ಪರವಾದ ಘೋಷಣೆಗಳನ್ನುಕೂಗುವಾಗ ನಮ್ಮ ಕಾರ್ಯಕರ್ತರು ಕೂಡ ಅವರತ್ತ ನುಗ್ಗಲು ಮುಂದಾದರು. ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದು ನಾನೇ ನಮ್ಮವರನ್ನು ತಡೆದೆ ಎಂದು ಸಿದ್ದರಾಮಯ್ಯ ಹೇಳಿದರು.

ಸೋಲಿನ ಭಯದಿಂದಾಗಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಈ ಗಲಭೆ ಮಾಡಿಸುತ್ತಿದ್ದಾರೆ ಎಂಬ ಅನುಮಾನವಿದೆ ಎಂದು ಅವರು ತಿಳಿಸಿದರು. ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಹಡಬಿಟ್ಟಿ ದುಡ್ಡು, ಪಾಪದ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಬಿಜೆಪಿಯವರು ಏನೇ ಮಾಡಿದರೂ ನಾವೇ ಅಲ್ಲಿ ಗೆಲ್ಲುವುದು ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

Facebook Comments