ಕೂಡಲೇ ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಸಿಎಂಗೆ ಸಿದ್ದು ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.29- ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸುವುದರ ಜತೆಗೆ ಹಾನಿಗೊಳಗಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಮರು ನಿರ್ಮಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲಾಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಅವರು ಇತ್ತೀಚೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ್ದು, ತಕ್ಷಣವೇ ಪರಿಹಾರ ಒದಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಬಾದಾಮಿ ಕ್ಷೇತ್ರದ ಅನೇಕ ಗ್ರಾಮಗಳಿಗೆ ಹಾಗೂ ಬೀದರ್, ಗುಲ್ಬರ್ಗಾ, ಯಾದಗಿರಿ ಜಿಲ್ಲಾಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ದು, ಈ ವರ್ಷದ ಹಾನಿ ಹಿಂದೆಂದಿಗಿಂತಲೂ ದುಪ್ಪಟ್ಟು ಪ್ರಮಾಣದಲ್ಲಿದೆ. ಕೊರೊನಾಕ್ಕೆ ತುತ್ತಾಗಿ ಜೀವನವನ್ನು ಕಳೆದುಕೊಂಡು ಹಳ್ಳಿಗಳಿಗೆ ಬಂದ ಜನ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.30ಕ್ಕಿಂತ ಅಧಿಕ ಬಿತ್ತನೆಯಾಗಿದೆ.

ಬೆಳೆಯೂ ಕೈಗೆ ಬರುವ ಕಾಲವಿದು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಭೀಕರ ಮಳೆಯಾಗಿದೆ. ಉಳಿದ ಜಿಲ್ಲಾಗಳ ಜನರ ದುಃಖವೂ ಭಿನ್ನವಾಗಿಲ್ಲ. ಶೇಂಗಾ, ಈರುಳ್ಳಿ, ಅಡಿಕೆ, ಭತ್ತ, ಕಾಫಿ, ಮೆಣಸು, ಜೋಳ, ಹಲವು ದ್ವಿದಳ ಧಾನ್ಯಗಳು, ಹತ್ತಿ, ಮೆಣಸು, ಮೆಣಸಿನಕಾಯಿ, ರಾಗಿ, ಸಜ್ಜೆ ಮುಂತಾದ ಬೆಳೆಗಳೆಲ್ಲ ಕೊಳೆತು ಹೋಗಿವೆ, ಕೊಚ್ಚಿ ಹೋಗಿವೆ.

ಕಳೆದ ವರ್ಷ ಬಿದ್ದ ಮಳೆಯಿಂದಾಗಿ ಹಾನಿಯಾದ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಮನೆಗಳಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರಕ್ಕೆ 2,47,000 ಮನೆಗಳಿಗೆ ಹಾನಿಯಾಗಿದೆ ಎಂದು ಮೆಮೊರಾಂಡಮ್ ಸಲ್ಲಿಸಲಾಗಿದೆ. ಆದರೆ ಪರಿಹಾರ ನೀಡಿರುವುದು ಕೇವಲ 1,24,000 ಮನೆಗಳಿಗೆ ಮಾತ್ರ. ಅದೂ ಸಹ ಅಲ್ಪ ಸ್ವಲ್ಪ ಪ್ರಮಾಣದಲ್ಲಿ. ಪೂರ್ಣ ಹಾನಿಯಾದ ಮನೆಗಳಿಗೆ 5 ಲಕ್ಷ ರೂ. ನೀಡುವುದಾಗಿ ಹೇಳಿ ಇದುವರೆಗೆ ಕೇವಲ 1 ಲಕ್ಷ ರೂ. ನೀಡಲಾಗಿದೆ.

ಸೆಪ್ಟೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ 8.68 ಲಕ್ಷ ಹೆಕ್ಟೇರ್ ಕೃಷಿ ಬೆಳೆ, 0.88 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಅಂದರೆ 11 ಲಕ್ಷ ಹೆಕ್ಟೇರ್‍ಗಳಲ್ಲಿ ಬೆಳೆದ ಬೆಳೆ ಸೆಪ್ಟೆಂಬರ್‍ವರೆಗೆ ಹಾನಿಯಾಗಿದೆ. ಈಗ ಅಕ್ಟೋಬರ್‍ನಲ್ಲಿ ಬಿದ್ದ ಮಳೆಯಿಂದಾಗಿ ಮುಕ್ಕಾಲು ರಾಜ್ಯವೇ ಕಂಗೆಟ್ಟಿದೆ. ರೈತ ಬೆಳೆದ ಬೆಳೆ ಕೈಗೆ ಬರದೆ ನೀರು ಪಾಲಾಗಿದೆ.

ಕರ್ನಾಟಕ ರೆಡ್ ಗ್ರಾಂ ಬೆಳೆಗಾರರ ಸಂಘದ ಅಂದಾಜಿನಂತೆ 7.55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಅದರಲ್ಲಿ ಸುಮಾರು 60ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾದ ದ್ವಿದಳ ಧಾನ್ಯಗಳ ಬೆಳೆ ನಷ್ಟವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬೀದರ್ ಜಿಲ್ಲಾಯಲ್ಲೂ ಕೂಡ ಕೃಷಿ ಇಲಾಖೆ ಪ್ರಕಾರ ಬಿತ್ತನೆಯಾದ 3,70,982 ಹೆಕ್ಟೇರ್‍ಗಳಲ್ಲಿ 2,47,209 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಮಳೆಯಿಂದ ಸಂಪೂರ್ಣ ಹಾನಿಯಾಗಿದೆ. ಗುಲ್ಬರ್ಗ, ಬಿಜಾಪುರ, ರಾಯಚೂರು ಜಿಲ್ಲೆಗಳಲ್ಲೂ ಕೂಡ ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿಯಾಗಿದೆ.

ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಬೆಳೆದ ಬಹುಪಾಲು ಬೆಳೆಗಳು ಹಾನಿಗೊಳಗಾಗಿವೆ. ಕೊರೊನಾದಿಂದಾಗಿ ಕಂಗೆಟ್ಟು ಕೂತಿದ್ದ ರೈತರು ಮತ್ತು ಜನ ಸಾಮಾನ್ಯರ ಮೇಲೆ ಪ್ರವಾಹ ಮಾರಣಾಂತಿಕ ಹೊಡೆತ ನೀಡಿದೆ. ಜಿಲ್ಲಾಡಳಿತಗಳು ಇನ್ನು ಸಂಪೂರ್ಣವಾಗಿ ಸಮೀಕ್ಷೆಯನ್ನೇ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

Facebook Comments