ಬಿಜೆಪಿಯ ದೇಶಪ್ರೇಮ ಹಾಸ್ಯಾಸ್ಪದ :ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.31- ದೇಶ ಪ್ರೇಮಕ್ಕೂ ಬಿಜೆಪಿಗೂ ಎಲ್ಲಿಂದ ಎಲ್ಲಿಯ ಸಂಬಂಧ. ಗಾಂಧಿ ಕೊಂದ ಗೋಡ್ಸೆ ವಂಶಸ್ಥರು ಇಂದು ದೇಶ ಪ್ರೇಮದ ಬಗ್ಗೆ ಮಾತನಾಡುತ್ತಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ಸರ್ದಾರ್‍ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಬಿಜೆಪಿಯಲ್ಲಿ ಒಬ್ಬರೂ ಸತ್ತಿಲ್ಲ. ಕಾಂಗ್ರೆಸಿಗರು ಸ್ವತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಂದಿರಾಗಾಂಧಿ ದೇಶದ ಐಕ್ಯತೆಗಾಗಿಯೇ ಜೀವ ಕಳೆದುಕೊಂಡರು ಎಂದರು.

ಖಾಲಿಸ್ತಾನ್ ಹೋರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇದ್ದಿದ್ದರೆ ಇಂದಿರಾಗಾಂಧಿ ಅವರ ಹತ್ಯೆಯಾಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಬಿಜೆಪಿಯವರು ಮಹಾತ್ಮಗಾಂಧೀಜಿಯವರನ್ನು ಕೊಂದ ಗೋಡ್ಸೆಯನ್ನು ಆರಾಧಿಸುತ್ತಾರೆ. ಮತ್ತೊಂದು ಕಡೆ ತಾವು ದೇಶಪ್ರೇಮಿಗಳು ಎಂದು ಹೇಳಿಕೊಳ್ಳುತ್ತಾರೆ. ಇದು ಇಮಾಮ್ ಸಾಬಿ ಮತ್ತು ಗೋಕುಲಾಷ್ಠಮಿಗೆ ಇರುವಂತಹ ಸಂಬಂಧ ಎಂದು ಲೇವಡಿ ಮಾಡಿದರು.

ಪ್ರಧಾನಿಯಾಗಿದ್ದ ನೆಹರು ಮತ್ತು ಆಗಿನ ಉಪಪ್ರಧಾನಿ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ನಡುವೆ ಉತ್ತಮ ಹೊಂದಾಣಿಕೆಯಿತ್ತು. ಆದರೆ ಬಿಜೆಪಿಯವರು ಸುಳ್ಳು ಸುದ್ದಿ ಹಬ್ಬಿಸಿ ಇತಿಹಾಸ ತಿರುಚುವ ಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಮಾಯಣ, ಮಹಾಭಾರತ, ಶಾಕುಂತಲೆಯಂತಹ ಮಹಾ ಕಾವ್ಯಗಳನ್ನು ಬರೆದವರು ಹಿಂದುಳಿದ ಸಮುದಾಯಗಳಿಗೆ ಸೇರಿದ ದಾರ್ಶನಿಕರು. ಮೇಲ್ಜಾತಿಯವರು ಯಾರೂ ಬರೆದಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಇಂದಿರಾಗಾಂಧಿ ಮತ್ತು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಸಾಧನೆಗಳನ್ನು ವಿವರಿಸಿದರು. ಇಂದಿರಾಗಾಂಧಿ ಅವರು ಬ್ಯಾಂಕ್ ರಾಷ್ಟ್ರೀಕರಣ ಮಾಡಿದರು, ಗರೀಬಿ ಹಠಾವೋ ಜಾರಿಗೆ ತಂದರು, ಬಡವರ ಪರವಾಗಿ 20 ಅಂಶಗಳ ಕಾರ್ಯಕ್ರಮ ಘೋಷಣೆ ಮಾಡಿದಾಗ ಕೆಲವರು ವಿರೋಧ ಮಾಡಿದರು. ಆ ಕಾರಣಕ್ಕಾಗಿಯೇ ಕಾಂಗ್ರೆಸ್ ವಿಭಜನೆಯಾಯಿತು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬ್ಯಾಂಕ್ ರಾಷ್ಟ್ರೀಕರಣ ಆಗದೇ ಇದ್ದಿದ್ದರೆ ಬಡವರು ಇಂದಿಗೂ ಆರ್ಥಿಕ ಸೌಲಭ್ಯ ಪಡೆಯಲು ಆಗುತ್ತಿರಲಿಲ್ಲ. ಭೂ ಸುಧಾರಣೆಯಂತಹ ಅನೇಕ ದಿಟ್ಟ ನಿರ್ಧಾರಗಳನ್ನು ಇಂದಿರಾಗಾಂಧಿ ಕೈಗೊಂಡರು ಎಂದರು ವಿವರಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments