ಅವಕಾಶವಾದಿ ರಾಜಕಾರಣಕ್ಕೆ ಮತ್ತೊಂದು ಹೆಸರೇ ಜೆಡಿಎಸ್: ಸಿದ್ಧರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಅರಸೀಕೆರೆ, ನ.25- ಅವಕಾಶವಾದಿ ರಾಜಕಾರಣಕ್ಕೆ ಮತ್ತೊಂದು ಹೆಸರೇ ಜೆಡಿಎಸ್ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕಿಸಿದ್ದಾರೆ. ತಾಲೂಕಿನ ಗಂಡಸಿ ಹೋಬಳಿ ಮಂಗಳಪುರದ ತಾಪಂ ಮಾಜಿ ಸದಸ್ಯ ನಾಗರಾಜ್ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಶಿರಾ ಹಾಗೂ ಆರ್.ಆರ್ ನಗರ ಉಪಚುನಾವಣೆಯಲ್ಲಿ ಜೆಡಿಎಸ್ ಗಳಿಸಿರುವ ಮತಪ್ರಮಾಣವನ್ನು ಗಮನಿಸಿದರೆ ಎರಡು ಪಕ್ಷಗಳ ನಡುವೆ ಒಳ ಒಪ್ಪಂದ ನಡೆದಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದರು.

ಈ ಹಿಂದೆ ಬಿಜೆಪಿ ಜೊತೆ ಹೋಗಿದ್ದ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಈಗಲೂ ಆ ಪಕ್ಷದ ಬಗ್ಗೆ ಒಲವಿದೆ. ಆದ್ದರಿಂದಲೇ ಅವರು ಆಡಳಿತ ಪಕ್ಷದ ಬಗ್ಗೆ ಮೃದು ನಿಲುವು ತಳೆದಿದ್ದಾರೆ. ಅಧಿಕಾರಕ್ಕಾಗಿ ಯಾರೊಂದಿಗೆ ಬೇಕಾದರೂ ಹೋಗಲು ಜೆಡಿಎಸ್ ಸಿದ್ಧರಿರುವುದರಿಂದಲೇ ಅವಕಾಶವಾದಿ ಪಕ್ಷ ಎಂಬುದು ಜಗತ್ಜಾಹಿರಾಗಿದೆ ಎಂದು ಕುಟುಕಿದರು.

ಉಪಚುನಾವಣೆಗಳು ಭವಿಷ್ಯದ ರಾಜಕಾರಣದ ದಿಗ್ಸೂಚಿಯಲ್ಲ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮುನಿರತ್ನ ಅವರ ಹಣ ಚುನಾವಣೆಯಲ್ಲಿ ಕೆಲಸ ಮಾಡಿದೆ. ಆದ್ದರಿಂದಲೇ ಫಲಿತಾಂಶ ವ್ಯತಿರಿಕ್ಷವಾಗಿದೆ. ನಮ್ಮ ಸರ್ಕಾರವಿದ್ದಾಗಲೂ ಎಲ್ಲಾ ಉಪ ಚುನಾವಣೆಗಳನ್ನು ಗೆದ್ದಿರುವ ಉದಾಹರಣೆ ಜನರ ಮುಂದಿದೆ.

ಮಸ್ಕಿ ಹಾಗೂ ಬಸವ ಕಲ್ಯಾಣ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಕಾರ್ಯತಂತ್ರ ರೂಪಿಸಲು ಮಾಜಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಶೀಘ್ರವೇ ಕಾರ್ಯ ಪೌರುತ್ತರಾಗಲಿದ್ದೇವೆ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮ್, ರಾಜ್ಯಸಭಾ ಮಾಜಿ ಸದಸ್ಯ ಹೆಚ್.ಕೆ.ಜವರೇಗೌಡ, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್ , ಬ್ಲಾಕ್ ಕಾಂಗ್ರೆಸ್‍ಅಧ್ಯಕ್ಷ ಶ್ರೀನಿವಾಸ್, ಮೆಟ್ರೋ ಬಾಬು , ಮುಖಂಡರಾದ ಜಿ.ಬಿ.ಶಶಿಧರ್, ಹಾಸನ ಎಸ್.ಕೆ.ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Facebook Comments