ಹಿಂದುಳಿದ ವರ್ಗಗಳ ಪಟ್ಟಿ ಪರಿಷ್ಕರಣೆಗೆ ಆಯೋಗದ ಶಿಫಾರಸ್ಸು ಕಡ್ಡಾಯ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.28- ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರ ಬಗ್ಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಕುಲಂಕೂಶವಾಗಿ ಅಧ್ಯಯನ ನಡೆಸಿ ವರದಿ ನೀಡಿದ ಬಳಿಕ, ಅದನ್ನು ಆಧರಿಸಿ ರಾಜ್ಯ ಸರ್ಕಾರ ಯಾವ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಅಥವಾ ಬಿಡಬೇಕು ಎಂಬ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ನಾನು ವಿರೋಧವನ್ನು ಮಾಡುವುದಿಲ್ಲ ಅಥವಾ ಪರವಾಗಿಯೂ ಇರುವುದಿಲ್ಲ. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸೂಕ್ತ ಆಧಾರ ಬೇಕು ಎಂದರು.

ಸುಪ್ರೀಂಕೋರ್ಟ್‍ನ ನಿರ್ದೇಶನದ ಮೇರೆಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಾಜ್ಯದಲ್ಲೂ ರಚನೆಯಾಗಿದೆ. ಅದಕ್ಕೆ ಜಯಪ್ರಕಾಶ್ ಹೆಗ್ಡೆ ಅವರನ್ನು ಅಧ್ಯಕ್ಷರನ್ನಾಗಿಯೂ ನೇಮಿಸಲಾಗಿದೆ. ಆಯೋಗವನ್ನು ಎಲ್ಲರೂ ಮರೆತಿದ್ದಾರೆ.

ಯಾವುದೇ ಸಮುದಾಯ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಯಾಗಬೇಕು ಎಂದು ಬಯಸಿದ್ದರೆ ಆ ಕುರಿತು ಆಯೋಗ ಪರಿಶೀಲಿಸಿ ವರದಿ ನೀಡಲಿದೆ. ಆಯೋಗ ಸೇರಿಸಿ ಎಂದರೆ ಸೇರಿಸಬೇಕು, ಬೇಡ ಎಂದರೆ ಕೈ ಬಿಡಬೇಕು. ಸರ್ಕಾರ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ ಎಂದರು.

ಯಾರು ಬೇಕಾದರೂ ನಮ್ಮನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಎಂದು ಕೇಳಬಹುದು. ಅದರಲ್ಲಿ ತಪ್ಪಿಲ್ಲ. ಆದರೆ ಸಂವಿಧಾನದ 15, 16, 340 ಕಲಂಗಳು ಏನು ಹೇಳುತ್ತವೆ ಎಂಬುದನ್ನು ಸರ್ಕಾರ ಗಮನದಲ್ಲಿ ಇಟ್ಟುಕೊಳ್ಳಬೇಕು. ಯಾವುದೇ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಅಥವಾ ಕೈಬಿಡುವ ಕೆಲಸ ಆಯೋಗದ ಶಿಫಾರಸ್ಸು ಆಧರಿಸಿಯೇ ಮಾಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಅದನ್ನು ಪಾಲಿಸಬೇಕು ಎಂದು ಒತ್ತಾಯಿಸಿದರು.

ನಾನು ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಯಾರೆಲ್ಲಾ ಹಿಂದುಳಿದಿದ್ದಾರೆ. ಅವರನ್ನೆಲ್ಲಾ ಸೇರಿಸಲು ನನ್ನ ಅಭ್ಯಂತರ ಇಲ್ಲ. ಆದರೆ ಯಾರೆಲ್ಲಾ ಅರ್ಹರು ಎಂದು ತೀರ್ಮಾನ ಮಾಡುವುದು ಮಾತ್ರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವಾಗಿರಬೇಕು ಎಂದರು.

ಆಯೋಗದ ವರದಿ ಇಲ್ಲದೆ ಸರ್ಕಾರವೇ ನೇರವಾಗಿ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು ವೀರಶೈವ ಲಿಂಗಾಯಿತರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವುದು ತಪ್ಪು ಎಂದು ಗೋತ್ತಾಗಿಯೇ ಯಡಿಯೂರಪ್ಪ ಅವರ ಸರ್ಕಾರ ಸಂಪುಟದಲ್ಲಿ ಚರ್ಚಿಸದೆ ಸುಮ್ಮನಾಗಿರಬಹುದು ಎಂದುಕೊಂಡಿದ್ದೇನೆ ಎಂದರು.
ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲಾಗುತ್ತದೆ.

ಹಾಗಾಗಿ ವೀರಶೈವ ಲಿಂಗಾಯಿತರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಲು ಯಡಿಯೂರಪ್ಪ ಯತ್ನಿಸಿದ್ದಾರೆ ಎಂದು ನಾನು ಹೇಳುವುದಿಲ್ಲ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾಗಲಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಬಿಜೆಪಿ ಸರ್ಕಾರ ಎಷ್ಟು ಬೇಗ ತೊಲಗುತ್ತದೆಯೋ ಅಷ್ಟು ರಾಜ್ಯಕ್ಕೆ ಒಳ್ಳೆಯದು ಎಂದರು.

ಬಿಜೆಪಿಗೆ ಹೋಗಿರುವ ವಲಸಿಗರನ್ನು ಮಂತ್ರಿ ಮಾಡಲಿ ಅಥವಾ ಬಿಡಲಿ. ಅದರ ಬಗ್ಗೆ ನನಗೆ ಯಾವ ಚಿಂತೆಯೂ ಇಲ್ಲ. ವ್ಯಾಪಾರ ಮಾಡಿಕೊಂಡು ಹೋಗಿರುವವರು ಅವರು. ಅವರ ವ್ಯಾಪಾರ ಏನು ಎಂದು ನನಗೆ ಗೊತ್ತಿಲ್ಲ. ಅದಕ್ಕೆ ನಾನು ಸಾಕ್ಷಿಯೂ ಅಲ್ಲ, ಆ ಪಕ್ಷಕ್ಕೆ ಸೇರಿದವನೂ ಅಲ್ಲ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಇತ್ತೀಚಿನ ದಿನಗಳಲ್ಲಿ ನಡೆದ ಬೆಳವಣಿಗೆಗಳನ್ನು ನಾನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ಸದ್ಯಕ್ಕೆ ನಾನು ರಾಜ್ಯ ಪ್ರವಾಸಕ್ಕೆ ಹೋಗುವುದಿಲ್ಲ ಎಂದರು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಬಗ್ಗೆ ನನಗೇನು ಗೊತ್ತಿಲ್ಲ. ಎಲ್ಲರ ವಿಷಯಕ್ಕೂ ನಾನು ಪ್ರತಿಕ್ರಿಯಿಸುವುದಿಲ್ಲ.

ಸಂತೋಷ್ ಅವರ ವೈಯಕ್ತಿಕ ಸಮಸ್ಯೆಗಳೇನೋ, ಮನೆ ಸಮಸ್ಯೆಗಳು ಏನಿವೆಯೋ ನಮಗೆ ಗೊತ್ತಿಲ್ಲ. ಬೇಕಿದ್ದರೆ ಇನ್ನೊಮ್ಮೆ ಸಂತೋಷ್ ಅವರ ಪತ್ನಿಯನ್ನು ಮಾತನಾಡಿಸಿ, ತನಿಖೆ ಮಾಡಲಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

Facebook Comments