ಬ್ರಿಟನ್ ನಿಂದ ಬಂದ ಮೇಲೆ ಹುಡುಕೋದಲ್ಲ, ಬರೋ ಮೊದಲೇ ಪರೀಕ್ಷೆ ಮಾಡಿ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.29- ಗೋಹತ್ಯೆ ನಿಷೇಧ ಕಾನೂನಿನಿಂದ ಹೈನುಗಾರಿಕೆ, ಕೃಷಿ ಮತ್ತು ಚರ್ಮೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬಿಜೆಪಿ ಸರ್ಕಾರ ಹಿಂದೆ-ಮುಂದೆ ಯೋಚಿಸದೆ ರಾಜಕಾರಣಕ್ಕಾಗಿ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಕಾನೂನು ರೂಪಿಸಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ತಂದಿದ್ದಾರೆ. ವಿಧಾನಸಭೆ, ಪರಿಷತ್‍ನಲ್ಲಿ ಚರ್ಚೆ ಮಾಡದೇ ಆತುರವಾಗಿ ತಂದಿದ್ದಾರೆ. ಅಂತ ಅಗತ್ಯ ಇರಲಿಲ್ಲ. ಸಾವಿರಾರು ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿವೆ. ಈ ಕಾಯ್ದೆಯಿಂದ ರೈತ ಸಮುದಾಯಕ್ಕೆ, ಕೃಷಿಗೆ ಹೊಡೆತ ಬೀಳಲಿದೆ. ಹಾಲು ಉತ್ಪಾದನೆ ಕುಸಿತವಾಗಲಿದೆ ಎಂದರು.

ರಾಜ್ಯದಲ್ಲಿ 42 ಲಕ್ಷ ಕುಟುಂಬಗಳು ಹೈನುಗಾರಿಕೆಯಲ್ಲಿ ಭಾಗಿಯಾಗಿವೆ. ಕೃಷಿ ಕ್ಷೇತ್ರ,ಚರ್ಮ ಉದ್ಯಮದ ಮೇಲೆ ಪರಿಣಾಮ ಬೀಳಲಿದೆ. ನಾವು ಹಾಕೋ ಚಪ್ಪಲಿಗಳು, ಹೆಣ್ಣುಮಕ್ಕಳ ವ್ಯಾನಿಟಿ ಬ್ಯಾಗ್ ಗಳು ಚರ್ಮದಿಂದ ಆಗೋದು. ಇದರಿಂದ ತೊಂದರೆ ಆಗಲಿದೆ.ಲಿಡ್ಕರ್ ಮುಚ್ಚಬೇಕಾಗುತ್ತದೆ ಎಂದು ತಿಳಿಸಿದರು. ಕೊರೊನಾ ರೂಪಾಂತರ ಪತ್ತೆ ವಿಚಾರದಲ್ಲಿ ಸರ್ಕಾರ ಜನರಲ್ಲಿ ಇರೋ ಆತಂಕ ದೂರ ಮಾಡಬೇಕು. ಬ್ರಿಟನ್ ನಿಂದ ಬಂದ ಮೇಲೆ ಹುಡುಕೋದಲ್ಲ. ಬರೋ ಮೊದಲೇ ವಿಮಾನ ನಿಲ್ದಾಣ ದಲ್ಲಿ ಪರೀಕ್ಷೆ ಮಾಡಿ , ಕ್ವಾರಂಟೈನ್ ಮಾಡಬೇಕಿತ್ತು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಯಾವುದೇ ಹೇಳಿಕೆಗಳಿಗೆ ರಿಯಾಕ್ಟ್ ಮಾಡುವುದಿಲ್ಲ. ಅವರ ಸುಳ್ಳು ಹೇಳಿಕೆಗಳಿಗೆ ನಾನ್ಯಾಕೆ ರಿಯಾಕ್ಟ್ ಮಾಡಲಿ. ಅವರು ದುರುದ್ದೇಶಪೂರಿತವಾಗಿ ಮಾತನಾಡುತ್ತಾರೆ. ಅದಕ್ಕೆಲ್ಲ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು. ಧರ್ಮೇಗೌಡ ಅವರನ್ನು ಬಲವಂತವಾಗಿ ಬಿಜೆಪಿ ಮತ್ತು ಜೆಡಿಎಸ್ ನವರು ಸಭಾಪತಿ ಪೀಠದಲ್ಲಿ ಕೂರಿಸಿದ್ದರು. ಅದು ಅವರಿಗೆ ಇಷ್ಟ ಇರಲಿಲ್ಲ ಎಂದು ಹೇಳಿದರು.

ಧರ್ಮೇಗೌಡ ನನ್ನ ಆಪ್ತ ಸ್ನೇಹಿತರಾಗಿದ್ದರು. ಅವರ ತಂದೆಯವರ ಕಾಲದಿಂದಲೂ ಕುಟುಂಬದ ಪರಿಚಯ ಇತ್ತು. ತಳಮಟ್ಟದಿಂದ ರಾಜಕಾರಣ ಮಾಡಿಕೊಂಡು ಬಂದವರು. ಸಹಕಾರ ಕ್ಷೇತ್ರಗಳಲ್ಲಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿದವರು ಅವರು ಂದರು.

ಧರ್ಮೇಗೌಡರ ತಂದೆ ಎಸ್.ಆರ್.ಲಕ್ಷ್ಮಯ್ಯ ಅವರೂ ನನ್ನ ಆಪ್ತ ಸ್ನೇಹಿತರಾಗಿದ್ದರು. ರೈತಪರ , ಜನಪರ ಕಾಳಜಿಯುಳ್ಳ ವ್ಯಕ್ತಿ ಅಗಲಿರೋದು ಸಾರ್ವಜನಿಕ ಕ್ಷೇತ್ರಕ್ಕೆ ಅಪಾರ ನಷ್ಟ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

Facebook Comments