ಈ ವಯಸ್ಸಿನಲ್ಲಿ ಯಡಿಯೂರಪ್ಪ ಏನೇನು ಮಾಡಿದ್ದಾರೋ ಯಾರಿಗೆ ಗೊತ್ತು..?: ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.17- ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಳ್ಳೆಯ ಸರ್ಕಾರ ಕೊಟ್ಟಿಲ್ಲ. ಹಾಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಒಳ್ಳೆಯ ಸರ್ಕಾರದ ಪರಿಕಲ್ಪನೆ ಇಲ್ಲ. ಹೀಗಾಗಿ ಯಡಿಯೂರಪ್ಪ ಅವರ ಸರ್ಕಾರವನ್ನು ಹೊಗಳಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಯಡಿಯೂರಪ್ಪ ಅವರ ಸರ್ಕಾರವನ್ನು ಅಮಿತ್ ಷಾ ಹೊಗಳಿರುವುದು ಆಶ್ಚರ್ಯ ತಂದಿದೆ. ಒಳ್ಳೆಯ ಸರ್ಕಾರದ ಬಗ್ಗೆ ಬಿಜೆಪಿಯವರಿಗೆ ಕಲ್ಪನೆಯೇ ಇಲ್ಲ ಎಂದು ಅವರು ಹೇಳಿದರು.

ಭದ್ರಾವತಿಯಲ್ಲಿ ಆರ್‍ಎಎಫ್ ತುಕಡಿಯ ಕಟ್ಟಡ ನಿರ್ಮಾಣಕ್ಕೆ ನಡೆದ ಅಡಿಗಲ್ಲು ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಖಂಡನೀಯ ಎಂದರು. ಕರ್ನಾಟಕದಲ್ಲಿ ಈ ಕಾರ್ಯಕ್ರಮ ನಡೆದಿದೆ. ಹೀಗಾಗಿ ಕನ್ನಡ ಭಾಷೆ ಇರಲೇಬೇಕಿತ್ತು. ಕನ್ನಡ ಭಾಷೆ ಬಳಸದೆ ಇರುವುದು ಅಪರಾಧ. ರಾಜ್ಯದಲ್ಲಿ ಹಿಂದಿ ಹೇರಿಕೆ ಅಷ್ಟು ಸುಲಭವಲ್ಲ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಂತರ ಮೈಸೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯನವರು, ಬಿಜೆಪಿಯವರು ಹೇಳುತ್ತಿರುವಂತೆ ಸಿಡಿ ಬಗ್ಗೆ ತನಿಖೆಯಾಗಬೇಕು. ಈ ವಯಸ್ಸಿನಲ್ಲಿ ಯಡಿಯೂರಪ್ಪ ಏನೇನು ಮಾಡಿದ್ದಾರೋ ಯಾರಿಗೆ ಗೊತ್ತು. ಅದರಲ್ಲೂ ನೋಡಲಾಗದಂತಹ ಅಸಹ್ಯವಾದ ಅಂಶಗಳಿವೆಯಂತೆ. ಸತ್ಯಾಸತ್ಯತೆ ಗೊತ್ತಾಗಬೇಕು ಎಂದರೆ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಅಮಿತ್ ಷಾ ಹೇಳಿದ್ದಾರೆ. ಯಾವುದೇ ಪಕ್ಷದ ಹೈಕಮಾಂಡ್ ಕೂಡ ಮುಖ್ಯಮಂತ್ರಿಯವರನ್ನು ತೆಗೆದುಹಾಕುತ್ತೇವೆ ಎಂದು ಹೇಳುವುದಿಲ್ಲ. ಆದರೆ, ನನಗೆ ಆರ್‍ಎಸ್‍ಎಸ್ ಮೂಲದಿಂದ ಬಂದಿರುವ ಮಾಹಿತಿ ಪ್ರಕಾರ, ಏಪ್ರಿಲ್ ಬಳಿಕ ಯಡಿಯೂರಪ್ಪ ಬದಲಾವಣೆಯಾಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಅವರ ಬೆಂಬಲಿಗರೇ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಯತ್ನಾಳ್ ಆರೋಪಿಸಿದ್ದಾರೆ. ವಿರೋಧ ಪಕ್ಷದವರು ಸರ್ಕಾರ ನಡೆಸುತ್ತಾರೆ ಎಂದಾದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿರುವುದು ನಾಮಕಾವಸ್ಥೆಗೆ ಎಂದಾಯಿತಲ್ಲವೆ? ಹಾಗಿದ್ದ ಮೇಲೆ ಅವರು ಅಧಿಕಾರದಲ್ಲಿದ್ದೂ ಪ್ರಯೋಜನವೇನು? ರಾಜೀನಾಮೆ ಕೊಟ್ಟು ಹೋಗಲಿ ಎಂದು ಹೇಳಿದರು.

ಯೋಗೇಶ್ವರ್ ಅವರು 9 ಕೋಟಿ ಸಾಲ ಮಾಡಿದ್ದಾರೆಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅವರಿಗೆ ಅಷ್ಟು ದುಡ್ಡು ಎಲ್ಲಿಂದ ಬಂತು? ಯಾರು ಕೊಟ್ಟರು? ಯಾವ ಕಾರಣಕ್ಕಾಗಿ ತಂದಿದ್ದರು? ಯಾರಿಗೆ ಖರ್ಚು ಮಾಡಿದ್ದಾರೆ ಎಂಬ ಬಗ್ಗೆಯೂ ತನಿಖೆಯಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಹೊಸಕೋಟೆ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಅವರು, ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಅದು ಇನ್ನೂ ಪೂರ್ಣವಾಗಿಲ್ಲ. ಬಹುಶಃ ಇನ್ನು 15 ದಿನಗಳೊಳಗೆ ಇತ್ಯರ್ಥವಾಗಬಹುದು. ಶರತ್ ಬಚ್ಚೇಗೌಡ ಅವರು ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರು. ಹಾಗಾಗಿ ಶೇ.70ರಷ್ಟು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಕಾರಣಕ್ಕಾಗಿ ನಿನ್ನೆ ಅವರು ನನ್ನನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು ಎಂದು ಹೇಳಿದರು.

Facebook Comments