ಶಿವಮೊಗ್ಗ ಸ್ಫೋಟ : ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಸಿದ್ದು ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.1- ಶಿವಮೊಗ್ಗ ಜಿಲ್ಲೆಯ ಹುಣಸೋಡು ಬಳಿ ಕಲ್ಲು ಗಣಿಗಾರಿಕೆಯಲ್ಲಿ ಜಿಲೆಟಿನ್ ಕಡ್ಡಿ ಸ್ಪೋಟಿಸಿ ಸಂಭವಿಸಿದ ಘಟನೆಯನ್ನು ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಿಯಮ 69ರಡಿ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲಾಧಿಕಾರಿಗಳಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ.ಹೀಗಾಗಿ ನ್ಯಾಯಾಧೀಶರಿಂದಲೇ ತನಿಖೆ ನಡೆಸಬೇಕೆಂದು ಮನವಿ ಮಾಡಿದರು. ಇಲ್ಲ ಅಧಿಕಾರಿಗಳಿಗೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ಕೊಟ್ಟವರು ಯಾರು? ಜಿಲ್ಲಾಧಿಕಾರಿಗಳು ಇಲ್ಲವೇ ಸಂಬಂಧಪಟ್ಟ ಅಧಿಕಾರಿಗಳು ಕಾಲ ಕಾಲಕ್ಕೆ ಸಭೆ ನಡೆಸಿದ್ದಾರೆ. ಇಂತಹ ಘಟನೆ ನಡೆಯುತ್ತಿರಲ್ಲಿಲ ಎಂದು ಹೇಳಿದರು.

ಪುಲ್ವಾಮದಲ್ಲಿ ಉಗ್ರರು ಸೈನಿಕರಿದ್ದ ವಾಹನ ಸ್ಫೋಟಿಸಲು ಯಾವ ರೀತಿ ಸ್ಫೋಟಕಗಳನ್ನು ಬಳಸಿದ್ದರೋ ಅದಕ್ಕಿಂತಲೂ ದೊಡ್ಡ ಮಟ್ಟದ ಜಿಲೆಟಿನ್ ಕಡ್ಡಿಗಳ ಬಳಕೆಯಾಗಿದೆ. ಈ ಜಿಲೆಟಿನ್ ಕಡ್ಡಿಗಳನ್ನು ಸಾಗಿಸುವಾಗ ಎಲ್ಲಿಯೂ ತಪಾಸಣೆ ನಡೆಸಲಿಲ್ಲವೇ? ಅಧಿಕಾರಿಗಳಿಗೆ ಅಷ್ಟು ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು.

# ಗಂಭೀರ ತನಿಖೆಗೆ ಎಸ್.ಆರ್.ಪಾಟೀಲ್ ಆಗ್ರಹ :
ಬೆಂಗಳೂರು,ಫೆ.1- ಶಿವಮೊಗ್ಗ ಹುಣಸೋಡು ಸ್ಫೋಟ ಪ್ರಕರಣವನ್ನು ಸರ್ಕಾರ ಗಂಭೀರ ವಾಗಿ ಪರಿಗಣಿಸಿ ಆಳವಾದ ತನಿಖೆಗೆ ಒಳಪಡಿಸಬೇಕೆಂದು ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ವಿಧಾನಪರಿಷತ್‍ನಲ್ಲಿಂದು ಆಗ್ರಹಿಸಿದರು. ನಿಯಮ 68ರಡಿ ವಿಷಯ ಪ್ರಸ್ತಾಪಿಸಿದ ಅವರು, ಮುಖ್ಯ ಮಂತ್ರಿಯವರ ತವರು ಜಿಲ್ಲೆಯಲ್ಲೇ ಇಂಥ ಘಟನೆ ನಡೆದಿದೆ. ಜಿಲ್ಲಾಧಿಕಾರಿಗಳು, ಪೊಲೀಸರು ಏನು ಮಾಡುತ್ತಿದ್ದಾರೆ. ಸಿಎಂ ಜಿಲ್ಲೆ ಯಲ್ಲೇ ಹೀಗಾದರೆ ಉಳಿದ ಜಿಲ್ಲೆಗಳ ಕಥೆಯೇನು ಎಂದು ಪ್ರಶ್ನಿಸಿದರು.

ಭಾರೀ ಸ್ಫೋಟಕ ವಸ್ತು ವಿಧ್ವಂಸಕ ಕೃತ್ಯ ನಡೆಸುವವರ ಕೈಗೆ ಸಿಕ್ಕರೆ ಏನು? ಎಂಬ ಆತಂಕ ವ್ಯಕ್ತಪಡಿಸಿದರು. ರಾಯದುರ್ಗದಿಂದ ಮೊಳಕಾಲ್ಮೂರ ಮಾರ್ಗವಾಗಿ ಸ್ಪೋಟಕ ವಸ್ತು ಶಿವಮೊಗ್ಗ ತಲುಪಿದೆ ಎಂಬ ಮಾಹಿತಿಯಿದೆ. ಪೊಲೀಸರು ಸಾಗಾಣಿಕೆಗೆ ಹೇಗೆ ಅವಕಾಶ ಮಾಡಿಕೊಟ್ಟರು?ಇದರ ಹಿಂದೆ ಯಾರ್ಯಾರು ಇದ್ದಾರೆ? ಪರೋಕ್ಷ, ಪ್ರತ್ಯಕ್ಷವಾಗಿ ಯಾರ್ಯಾರು ಕಾರಣಕರ್ತರು ಎಂಬುದನ್ನು ತನಿಖೆಗೊಳಪಡಿಸಬೇಕು ಎಂದರು.

ಮಧ್ಯಪ್ರವೇಶಿಸಿ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ದುರಂತ ಸಂಭವಿಸಿದ ನಂತರ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದಾರೆ. ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಆಗಿರುವ ತಪ್ಪನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

Facebook Comments