ಈಶ್ವರಪ್ಪ ಯಾರು..? ನನಗೆ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಫೆ.11- ಕಾಂಗ್ರೆಸ್ ಹಿಂದುಳಿದವರ ಪರವಾಗಿದೆ. ಸದ್ಯ ಅಹಿಂದ ಹೋರಾಟ, ಸಮಾವೇಶದ ಅವಶ್ಯಕತೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದ್ದಾರೆ. ನಮ್ಮ ಸರ್ಕಾರ ಇದ್ದಾಗ ನೀಡಿದ ಯೋಜನೆಗಳು ಜನರ ಮನದಲ್ಲಿ ಶಾಶ್ವತವಾಗಿ ನೆಲೆಸಿವೆ. ಹೀಗಿರುವಾಗ ಅಹಿಂದ ಸಮಾವೇಶ ನಡೆಸುವ ಆಲೋಚನೆ ಸದ್ಯಕ್ಕಿಲ್ಲ ಎಂದು ತಿಳಿಸಿದರು.

ಇತ್ತೀಚೆಗೆ ನಡೆದ ಕುರುಬ ಸಮಾವೇಶದಲ್ಲಿ ಸಚಿವ ಈಶ್ವರಪ್ಪ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಏನೂ ಸಾಧನೆ ಮಾಡಿಲ್ಲ ಎಂದು ಟೀಕೆ ಮಾಡಿದ್ದಾರೆ. ಆದರೆ, ನಾನು ಮಾಡಿದ ಅಭಿವೃದ್ಧಿ ಬಗ್ಗೆ ಜನರಿಗೆ ಗೊತ್ತಿದೆ. ಹೂ ಈಸ್ ಈಶ್ವರಪ್ಪ? ಅವರ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ. ಐ ಡೋಂಟ್ ಕೇರ್ ಈಶ್ವರಪ್ಪ ಎಂದು ತಿರುಗೇಟು ನೀಡಿದರು.

ನನ್ನ ಸಾಧನೆ ಬಗ್ಗೆ ಈಶ್ವರಪ್ಪ ಅವರಿಗೆ ವರದಿ ಕೊಡುವ ಅವಶ್ಯಕತೆ ಇಲ್ಲ. ರಾಜ್ಯದ ಜನರೇ ನನಗೆ ಸರ್ಟಿಫಿಕೇಟ್ ಕೊಡಬೇಕು ಎಂದು ಹೇಳಿದ್ದಾರೆ. ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲ್ಲ ಎಂದಿರುವುದರ ಹಿಂದೆ ಅಚ್ಚರಿ ಇಲ್ಲ. ಉತ್ತರ ಕರ್ನಾಟಕದಲ್ಲಿ ಅವರಿಗೆ ನೆಲೆ ಇಲ್ಲ.

ಜೆಡಿಎಸ್‍ನವರು ಬಿಜೆಪಿಗೆ ಸಹಾಯ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್‍ನಲ್ಲಿ ಕಾರ್ಯಕರ್ತರ ಕೊರತೆಯಿಲ್ಲ. ಚುನಾವಣೆ ಘೋಷಣೆಯಾದ ಕೂಡಲೇ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ ಎಂದು ಹೇಳಿದರು.

ಕುರುಬರಿಗೆ ಎಸ್‍ಟಿ ಮೀಸಲಾತಿ ನೀಡುವ ವಿಚಾರ ಕುರಿತಂತೆ ಅಧ್ಯಯನದ ವರದಿ ಬಂದಿಲ್ಲ. ವರದಿ ಬರುವ ಮುನ್ನವೇ ಹೋರಾಟ ಬೇಡ ಅಂದಿದ್ದೆ. ನಾನು ಸಿಎಂ ಆಗಿದ್ದ ವೇಳೆ ನಾಲ್ಕು ಜಿಲ್ಲಾಗಳಲ್ಲಿ ಕುರುಬರನ್ನು ಎಸ್‍ಟಿಗೆ ಸೇರಿಸಬೇಕು ಎಂದು ಆದೇಶ ಮಾಡಿದ್ದೆ. ಎಸ್‍ಟಿ ಮೀಸಲು ಹೋರಾಟದಲ್ಲಿ ರಾಜಕೀಯ ಮಾಡಲ್ಲ. ಇತ್ತೀಚೆಗೆ ನಡೆದ ಕುರುಬ ಹೋರಾಟ ಸಮಾವೇಶ ಆರ್‍ಎಸ್‍ಎಸ್ ಪ್ರೇರಿತವಾಗಿದ್ದು, ಈಶ್ವರಪ್ಪ ಅವರನ್ನು ಎತ್ತಿಕಟ್ಟಿ ಹೋರಾಟ ಮಾಡಿಸಿದ್ದಾರೆ ಎಂದು ಇದೇ ವೇಳೇ ಸಿದ್ದು ಆರೋಪಿಸಿದರು.

Facebook Comments