ನಾಳೆ ಡೆಲ್ಲಿಗೆ ಹಾರಲಿದ್ದಾರೆ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.15- ಸುಮಾರು ಒಂದು ವರ್ಷದ ಬಳಿಕ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುತ್ತಿದ್ದು, ನಾಳೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಕೊರೊನಾ ಸಂಕಷ್ಟದಿಂದಾಗಿ ಸಿದ್ದರಾಮಯ್ಯ ಅವರು ಒಂದು ವರ್ಷದಿಂದ ದೆಹಲಿ ಪ್ರವಾಸವನ್ನು ಮುಂದೂಡಿದ್ದರು. ರಾಹುಲ್‍ಗಾಂಧಿ ಅವರ ಭೇಟಿಗೆ ಹಲವು ಬಾರಿ ಸಮಯ ಕೇಳಿದ್ದರಾದರೂ ಅವಕಾಶ ಸಿಕ್ಕಿರಲಿಲ್ಲ. ನಾಳೆ ಸಂಜೆ 4 ಗಂಟೆಗೆ ರಾಹುಲ್‍ಗಾಂಧಿ ಸಮಯ ನೀಡಿರುವುದರಿಂದ ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ.

ನಾಳೆ ಬೆಳಗ್ಗೆ 9.45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿ ಸಂಜೆ 4 ಗಂಟೆಗೆ ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಿ ರಾತ್ರಿ ಅಲ್ಲಿಯೇ ತಂಗಲಿದ್ದು, ಫೆ.17ರಂದು ಮಧ್ಯಾಹ್ನ 2.10ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಈ ನಡುವೆ ಕಾಂಗ್ರೆಸ್‍ನ ಹಲವು ನಾಯಕರುಗಳನ್ನು ಭೇಟಿ ಮಾಡಿ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದಾರೆ.

ರಾಜ್ಯಸಭೆ ವಿರೋಧಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುಖರ್ಗೆ ಅವರನ್ನು ಇದೇ ವೇಳೆ ಅಭಿನಂದಿಸಲಿದ್ದಾರೆ. ರಾಜ್ಯ ರಾಜಕಾರಣ ಸೇರಿದಂತೆ ಹಲವಾರು ವಿಷಯಗಳ ಕುರಿತು ಸಿದ್ದರಾಮಯ್ಯ ಅವರು ರಾಹುಲ್‍ಗಾಂಧಿ ಅವರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments