ಕೊರೊನಾ ನಿರ್ವಹಣೆ ಕುರಿತ ಶ್ವೇತಪತ್ರಕ್ಕೆ ಸಿದ್ದು ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.27- ಕೊರೊನಾಕ್ಕೆ ಸಂಬಂಧಪಟ್ಟಂತೆ ಸೋಂಕಿತರ ಸಂಖ್ಯೆ, ಚಿಕಿತ್ಸೆ, ವಿವಿಧ ಖರೀದಿಗಳು ಸೇರಿದಂತೆ ಎಲ್ಲಾ ವಿಷಯಗಳನ್ನು ಒಳಗೊಂಡ ಶ್ವೇತ ಪತ್ರವನ್ನು ಹೊರಡಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ದಾಖಲೆಗಳ ಪ್ರಕಾರ 2020ರ ಡಿಸೆಂಬರ್ ವರೆಗೆ ಕೋರೊನಾ ಸಾವಿನ ಸಂಖ್ಯೆ 12,090.

ರಾಜ್ಯ ಯೋಜನ ಮತ್ತು ಅಂಕಿಅಂಶಗಳ ಪ್ರಕಾರ ಇದೇ ಅವಧಿಯಲ್ಲಿ ಸಾವಿನ ಸಂಖ್ಯೆ 22,320. ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂದು ಸಿದ್ದರಾಮಯ್ಯ ಅವರು ಇಲಾಖೆಯ ಅಧಿಕೃತ ಪ್ರಕಟಣಾ ಪತ್ರಗಳನ್ನು ಲಗತ್ತಿಸಿ ಪ್ರಶ್ನಿಸಿದ್ದಾರೆ.

ಆರೋಗ್ಯ ಸಚಿವ ಸುಧಾಕರ್ ಭ್ರಷ್ಟಾಚಾರ ಮತ್ತು ಸಾಮಥ್ರ್ಯ ಹೀನತೆಯನ್ನು ಮುಚ್ಚಿಕೊಳ್ಳಲು ನಿರಂತರವಾಗಿ ಸುಳ್ಳು ಹೇಳುತ್ತಲೇ ಬರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಕೊರೊನಾ ಉಲ್ಬಣಕ್ಕೆ ಸರ್ಕಾರದ ಅಸಮರ್ಥ, ಭ್ರಷ್ಟಾಚಾರ ಮತ್ತು ಸುಳ್ಳುಗಳೇ ಕಾರಣ ಎಂದು ನಾವು ಮೊದಲ ದಿನದಿಂದಲೂ ಹೇಳುತ್ತಲೇ ಬರುತ್ತಿದ್ದೇವೆ. ಆದರೆ , ಸರ್ಕಾರ ತಪ್ಪನ್ನು ತಿದ್ದಿಕೊಳ್ಳದೆ ಎಲ್ಲವನ್ನು ಸಮರ್ಥಿಸಿಕೊಳ್ಳುತ್ತಾ ಲಜ್ಜೆಗೇಡಿತನ ಪ್ರದರ್ಶಿಸಿದ ಫಲವನ್ನು ರಾಜ್ಯದ ಜನರು ಅನುಭವಿಸುವಂತಾಗಿದೆ ಎಂದು ಸಿದ್ದರಾಮಯ್ಯ ಟ್ವಿಟರ್‍ನಲ್ಲಿ ಕಿಡಿಕಾರಿದ್ದಾರೆ.

ಸರ್ಕಾರ ಕೊರೊನಾ ಸಾವಿನ ಬಗ್ಗೆ ಮಾತ್ರವಲ್ಲ. ಔಷಧಿ, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್‍ಗಳಿಂದ ಹಿಡಿದು ಹಾಸಿಗೆಗಳ ಖರೀದಿವರೆಗೂ ಎಲ್ಲದರಲ್ಲೂ ಸುಳ್ಳು ಹೇಳುತ್ತಾ ಬಂದಿದೆ. ಭ್ರಷ್ಟಾಚಾರ ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದೆ. ಕೊರೊನಾವನ್ನು ಔಷಧಿಯಿಂದ ಗೆಲ್ಲಬೇಕೆ ಹೊರತು ಸುಳ್ಳುಗಳಿಂದಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕೊರೊನಾ ಸೋಂಕು, ಸಾವು, ಚಿಕಿತ್ಸೆ ಮತ್ತು ನೊಂದ ಕುಟುಂಬಗಳಿಗೆ ನೀಡಿರುವ ಪರಿಹಾರದ ಬಗ್ಗೆ ಸರ್ಕಾರ ಕೂಡಲೇ ಶ್ವೇತ ಪತ್ರ ಹೊರಡಿಸಿ ರಾಜ್ಯದ ಜನರಿಗೆ ನಿಜ ಸಂಗತಿ ತಿಳಿಸಬೇಕೆಂದು ಒತ್ತಾಯಿಸಿದ್ದಾರೆ.

Facebook Comments