‘ಓಟ್ ಬಿಜೆಪಿಗೆ, ಕೆಲಸಕ್ಕೆ ನಾವಾ..?’ : ನಿನ್ನೆ ಕುಮಾರಣ್ಣ, ಇಂದು ಸಿದ್ಧರಾಮಣ್ಣನ ಸರದಿ

ಈ ಸುದ್ದಿಯನ್ನು ಶೇರ್ ಮಾಡಿ

ಬಾದಾಮಿ,ಜೂ 27- ಮೋದಿಗೆ ಓಟ್ ಹಾಕ್ತೀರಾ.. ಕೆಲಸ ಮಾಡಲು ನಾವ್ ಬೇಕಾ ಎಂದು ನಿನ್ನೆಯಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ರಾಯಚೂರಿನಲ್ಲಿ ರೇಗಿದ್ದ ಬೆನ್ನಲ್ಲೇ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ನೀವು ಬಿಜೆಪಿಗೆ ಓಟ್ ಹಾಕ್ತೀರಾ; ಏಕೆಂದು ಗೊತ್ತಾಗುತ್ತಿಲ್ಲ ಎಂದು ಗರಂ ಆದರು.

ಬಾದಾಮಿ ತಾಲೂಕಿನ ಎಸ್.ಕೆ.ಆಲೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಹಲವಾರು ಜನಪರ ಯೋಜನೆಗಳನ್ನು ತಂದಿದ್ದೇವೆ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಆದರೂ ಜನ ಬಿಜೆಪಿ ಬಗ್ಗೆ ಏಕೆ ಒಲವು ವ್ಯಕ್ತಪಡಿಸುತ್ತಿದ್ದಾರೋ ತಿಳಿಯುತ್ತಿಲ್ಲ.

ನೀವು ಹೀಗೇಕೆ ಮಾಡುತ್ತಿದ್ದೀರೋ ಗೊತ್ತಾಗುತ್ತಿಲ್ಲ ಎಂದು ಗ್ರಾಮಸ್ಥರನ್ನು ಖಾರವಾಗಿಯೇ ಪ್ರಶ್ನಿಸಿದರು. ಅಭಿವೃದ್ಧಿ ಕೆಲಸ ಮಾಡಿದವರು ನಾವು. ನಮಗೆ ಮತ ಹಾಕುವುದಿಲ್ಲ. ಬರೀ ಭಾಷಣ, ಘೋಷಣೆಗಳಿಂದ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ಅಂತಹವರಿಗೆ ಮತ ಹಾಕುತ್ತೀರ. ವಾಸ್ತವವನ್ನು ಅರಿತುಕೊಳ್ಳಬೇಕು ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.

ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಗೆ 9 ಸಾವಿರ ಲೀಡ್ ಹೋಗಿದೆ. ಪ್ರಧಾನಿ ಮೋದಿಯವರು ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿಗೆ ಓಟ್ ಹಾಕಲಾಗಿದೆ. ಅಭಿವೃದ್ಧಿ ಕೆಲಸ ನಮ್ಮದು ಓಟ್ ಮಾತ್ರ ಬಿಜೆಪಿಗೆ ಎಂದು ಅವರು ಗರಂ ಆದರು.

ಬಾದಾಮಿ ವಿಧಾನಸಭಾ ಕ್ಷೇತ್ರದ ಆಲೂರು ಎಸ್.ಕೆ. ಗ್ರಾಮದಲ್ಲಿ ಗ್ರಾಮಪಂಚಾಯತಿಯ ನೂತನ ಕಟ್ಟಡಕ್ಕೆ ಈ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸಿದರು. ಬಸವ ವಸತಿ ಯೋಜನೆಯಡಿ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ 8300 ಮನೆಗಳು ಮಂಜೂರಾಗಿವೆ. ಅರ್ಹ ಫಲಾನುಭವಿಗಳಿಗೆ ಮನೆಗಳು ದೊರೆಯುವಂತೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ಮಾಡಿದ ಅಭಿವೃದ್ಧಿ ಕಾರ್ಯಗಳು ಕೈ ಹಿಡಿದಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು, ಲೋಕಸಭೆ ಚುನಾವಣೆಯಲ್ಲಿ ಕಂಡ ಹೀನಾಯ ಸೋಲಿನಿಂದ ಸಿದ್ದರಾಮಯ್ಯ ಹೊರಬಂದಂತಿಲ್ಲ.

Facebook Comments