ದೂರ ಸರಿಯುತ್ತಿರುವ ಅಹಿಂದ ನಾಯಕರು, ಚಿಂತೆಗೆ ಬಿದ್ದ ಸಿದ್ದರಾಮಯ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಆ.23- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಗಟ್ಟಿಗೊಳಿಸಲು ಜೊತೆಯಾಗಿದ್ದ ಅಹಿಂದ ವಲಯ ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ದೂರ ಸರಿಯುತ್ತಿರುವುದರಿಂದ ಸಿದ್ದರಾಮಯ್ಯ ಅವರು ಚಿಂತೆಗೊಳಗಾಗಿದ್ದಾರೆ ಎಂದು ಹೇಳಲಾಗಿದೆ. ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಸಿದ್ದು ಜತೆಗಿದ್ದ ಪ್ರಮುಖ ನಾಯಕರು ಹಂತ ಹಂತವಾಗಿ ದೂರ ಸರಿಯಲಾರಂಭಿಸಿದ್ದಾರೆ. ಅಧಿಕಾರ ಇದ್ದಾಗ ಸುತ್ತಲೂ ಜಮಾಯಿಸುತ್ತಿದ್ದ ಪ್ರಭಾವಿ ನಾಯಕರು ಈಗ ಕಾಣಸಿಗುತ್ತಿಲ್ಲ.

ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಹೆಚ್ಚು ಮಣೆ ಹಾಕಿದೆ. ಆದರೂ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ಪರಮಾಪ್ತ ಸಂಗಾತಿಗಳು ದೂರ ಸರಿಯಲಾರಂಭಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರ ನಡೆಯನ್ನು ವಿರೋಧಿಸಿ ಮಾಜಿ ಸಚಿವರಾದ ಶ್ರೀನಿವಾಸ್ ಪ್ರಸಾದ್ ಮತ್ತು ಎಚ್.ಎಂ.ರೇವಣ್ಣ ದೂರವಾದರು. ಅದರ ಪರಿಣಾಮ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲುವಂತಾಯಿತು.

ನಂತರ ಬೆಳವಣಿಗೆಯಲ್ಲಿ ಎಚ್.ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವುದು ಸಿದ್ದರಾಮಯ್ಯ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಸಿದ್ದರಾಮಯ್ಯ ಅವರಿಗೆ ಬಹಳ ವರ್ಷಗಳಿಂದಲೂ ರಾಜಕೀಯವಾಗಿ ಹೆಗಲು ಕೊಟ್ಟಿದ್ದ ಸತೀಶ್ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ವಿ.ಎಸ್.ಉಗ್ರಪ್ಪ, ಎಚ್.ಎಂ.ರೇವಣ್ಣ, ಎಂ.ಟಿ.ಬಿ.ನಾಗರಾಜ್, ಬೈರತಿ ಬಸವರಾಜ್ ಮತ್ತಿತರರು ಹಂತ ಹಂತವಾಗಿ ದೂರ ಸರಿಯಲಾರಂಭಿಸಿದ್ದಾರೆ. ಸಿ.ಎಂ.ಇಬ್ರಾಹಿಂ ಅವರು ಸಿದ್ದರಾಮಯ್ಯ ಅವರ ಜತೆಯಲ್ಲೇ ಇದ್ದರೂ ಈ ಹಿಂದಿನ ಆತ್ಮೀಯತೆ ಕಾಣುತ್ತಿಲ್ಲ.

ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಇಳಿದಾಗಲೂ ಸಿದ್ದರಾಮಯ್ಯ ಅವರ ಪ್ರಭಾವ ತಗ್ಗಿರಲಿಲ್ಲ. ಆದರೆ, ಸಚಿವ ಸಂಪುಟ ವಿಸ್ತರಣೆ ವೇಳೆ ಇದರ ಬೆಳವಣಿಗೆಗಳು ಸಿದ್ದು ಅವರ ಅಸ್ತಿತ್ವವನ್ನೇ ಹಲುಗಾಡಿಸಿದೆ. ಬಹಳಷ್ಟು ನಾಯಕರು ಸಿದ್ದರಾಮಯ್ಯ ತಮ್ಮ ಹಿತ ಕಾಪಾಡುತ್ತಾರೆ ಎಂಬ ನಂಬಿಕೆ ಹೊಂದಿದ್ದರು. ಆದರೆ, ಸಮ್ಮಿಶ್ರ ಸರ್ಕಾರದ ರಾಜಕೀಯ ಹೊಂದಾಣಿಕೆಯಲ್ಲಿ ಸಿದ್ದು ಬೆಂಬಲಿಗರ ಕೈ ಹಿಡಿಯಲಾಗಲಿಲ್ಲ. ಇದು ಬಹಳಷ್ಟು ಮಂದಿಯಲ್ಲಿ ಅಸಮಾಧಾನ ಮೂಡಿಸಿತ್ತು. ಹೀಗಾಗಿ ಹಂತ ಹಂತವಾಗಿ ಸಿದ್ದು ಆಪ್ತ ವಲಯ ಕರಗತೊಡಗಿದೆ.

ಇದನ್ನು ಗಮನಿಸಿರುವ ಸಿದ್ದರಾಮಯ್ಯ ಅವರು ಸೆ.3ರಿಂದ ವಿದೇಶಿ ಪ್ರವಾಸ ಕೈಗೊಂಡು ವಾಪಸ್ ಬಂದ ನಂತರ ರಾಜಕೀಯವಾಗಿ ಚೇತರಿಸಿಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಅಸ್ಥಿತ್ವವನ್ನು ಕಾಪಾಡಿಕೊಳ್ಳಲೇಬೇಕೆಂದು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ವಿಧಾನಪರಿಷತ್ ಸದಸ್ಯೆ ಜಯಮಾಲ ಅವರನ್ನು ಸಚಿವರನ್ನಾಗಿ ಮಾಡಿ ಸಭಾನಾಯಕಿಯನ್ನಾಗಿ ನೇಮಿಸಿರುವುದರ ಹಿಂದೆ ಸಿದ್ದರಾಮಯ್ಯ ಅವರ ಪ್ರಭಾವ ಇದೆ ಎಂದು ಬಹಳಷ್ಟು ಶಾಸಕರಲ್ಲಿದೆ. ಹೀಗಾಗಿ ಎಚ್.ಎಂ.ರೇವಣ್ಣ ಮತ್ತು ಉಗ್ರಪ್ಪ ಮತ್ತಿತರರು ಮುನಿಸಿಕೊಂಡಿದ್ದಾರೆ. ಇದೆಲ್ಲದಕ್ಕೂ ವಿದೇಶಿ ಪ್ರವಾಸದಿಂದ ವಾಪಸ್ ಬಂದ ನಂತರ ಪರಿಹಾರ ಕಂಡುಹಿಡಿಯುವದಾಗಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin

4 thoughts on “ದೂರ ಸರಿಯುತ್ತಿರುವ ಅಹಿಂದ ನಾಯಕರು, ಚಿಂತೆಗೆ ಬಿದ್ದ ಸಿದ್ದರಾಮಯ್ಯ..!

Comments are closed.