“ನನ್ನ ಸಲಹೆ ಮೇರೆಗೆ ಯಡಿಯೂರಪ್ಪನವರು ಸಿಬಿಐಗೆ ನೀಡಿದ್ದಾರೆಂಬುದು ಶುದ್ಧ ಸುಳ್ಳು”

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಆ.19- ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಯಡಿಯೂರಪ್ಪನವರು ನನ್ನ ಸಲಹೆ ಮೇರೆಗೆ ಸಿಬಿಐಗೆ ನೀಡಿದ್ದಾರೆಂಬುದು ಶುದ್ಧ ಸುಳ್ಳು. ಅಮಿತ್ ಷಾ ಅವರ ಸೂಚನೆ ಮೇರೆಗೆ ಸಿಬಿಐಗೆ ವಹಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಸುಮ್ಮನೆ ನನ್ನ ಹೆಸರು ಹೇಳುತ್ತಾರೆ. ಇದು ನೂರಕ್ಕೆ ನೂರರಷ್ಟು ಸುಳ್ಳು. ಅಮಿತ್ ಷಾ ಅವರ ಸೂಚನೆ ಮೇರೆಗೆ ಸಿಬಿಐಗೆ ವಹಿಸಿದ್ದಾರೆ ಎಂದರು.

ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಯಾವುದೇ ರಾಜಕೀಯ ದುರುದ್ದೇಶ ಇರಬಾರದು. ಬಿ.ಎಸ್.ಯಡಿಯೂರಪ್ಪ ನನ್ನ ಸಲಹೆ ಕೇಳುವುದಾದರೆ ಆಪರೇಷನ್ ಕಮಲ ಕೂಡ ಸಿಬಿಐಗೆ ನೀಡಲಿ. ಅದರಲ್ಲೂ ಕೋಟ್ಯಂತರ ಹಗರಣ ನಡೆದಿದೆ. ಈ ಸಂಬಂಧ ಕೆಲವು ಶಾಸಕರು ಖುದ್ದು ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಸಿಬಿಐಗಿಂತ ಎಸ್‍ಐಟಿ ಅಥವಾ ಸಿಐಡಿಯಿಂದ ತನಿಖೆ ನಡೆಸಬಹುದಿತ್ತು. ಸಿಬಿಐಅನ್ನು ದುರ್ಬಳಕೆ ಮಾಡಿಕೊಳ್ಳುವುದು ಬಿಜೆಪಿಯ ಪ್ಲಾನ್. ಫೋನ್ ಟ್ಯಾಪಿಂಗ್ ಕೇಸ್‍ನಲ್ಲಿ ಆಪರೇಷನ್ ಕಮಲದ ಬಗ್ಗೆ ಬಿಜೆಪಿ ತನಿಖೆ ನಡೆಸುವುದಿಲ್ಲ ಎಂದು ಆರೋಪಿಸಿದರು.

ಆಪರೇಷನ್ ಕಮಲ ಸಂಬಂಧ ಯಡಿಯೂರಪ್ಪ ಅವರ ಆಡಿಯೋ ಪ್ರಕರಣದ ಬಗ್ಗೆ ಎಸ್‍ಐಟಿ ತನಿಖೆ ನಡೆಸಬೇಕಿತ್ತು. ಆಗ ಆಪರೇಷನ್ ಕಮಲದ ಸತ್ಯ ಹೊರಬರುತ್ತಿತ್ತು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತನಿಖೆ ಮಾಡಲಿಲ್ಲ ಎಂದು ಹೇಳಿದರು.

Facebook Comments