“ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದವರು ಉಳೀತಾರಾ..? : ಸಿದ್ದು
ಹುಬ್ಬಳ್ಳಿ,ಆ.26- ಬಿಎಸ್ವೈ ಸರ್ಕಾರ ಬಹಳ ದಿನ ಇರುತ್ತದೆ ಎಂದು ಯಾರಿಗೂ ನಂಬಿಕೆಯಿಲ್ಲ. ಬಂಡಾಯ ಶಾಸಕರನ್ನಿಟ್ಟುಕೊಂಡು ಸರ್ಕಾರ ನಡೆಸಲು ಸಾಧ್ಯವೇ? ಹಾಲು ಕುಡಿಯುವ ಮಕ್ಕಳೇ ಬದುಕುವುದಿಲ್ಲ ಇನ್ನು ವಿಷ ಕುಡಿದವರು ಬದುಕುತ್ತಾರೆಯೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಟೀಕಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸರ್ಕಾರದ ಬೆಳವಣಿಗೆಗಳನ್ನು ನೋಡಿದರೆ ಬಹಳ ಕಾಲ ನಡೆಯುವ ಸಾಧ್ಯತೆಗಳು ಕಡಿಮೆ. ಅತೃಪ್ತರನ್ನಿಟ್ಟುಕೊಂಡು ಬಹಳ ದಿನ ಸರ್ಕಾರ ನಡೆಸಲು ಸಾಧ್ಯವಾಗುವುದಿಲ್ಲ ಎಂದರು.
ಬಿಜೆಪಿಯವರು ವಾಮಮಾರ್ಗದಿಂದ ಆಡಳಿತಕ್ಕೆ ಬಂದಿದ್ದಾರೆ. ಸಚಿವರು ನೆರೆಪಿಡಿತ ಜಿಲ್ಲೆಗಳಲ್ಲಿ ಇರಬೇಕಿತ್ತು. ಆದರೆ ಅವರು ದೆಹಲಿ-ಬೆಂಗಳೂರು ಮಧ್ಯೆ ಟೂರ್ ಮಾಡುತ್ತಿದ್ದಾರೆ. ಭಾರಿ ಪ್ರಮಾಣದಲ್ಲಿ ನೆರೆ ಹಾನಿಯಾದರೂ ಕೇಂದ್ರದಿಂದ ಸೂಕ್ತ ಪರಿಹಾರ ತರುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಈಗಲಾದರೂ ಜನರ ಕಡೆ ನೋಡಲಿ. ಅವರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ಹೇಳಿದರು.
ಜೆಡಿಎಸ್ ವಿರುದ್ಧ ಕಿಡಿ: ದೇವೇಗೌಡರ ಕುಟುಂಬದ ಆರೋಪದ ಬಗ್ಗೆ ನಾನು ಸುಧೀರ್ಘವಾಗಿ ಉತ್ತರ ಕೊಟ್ಟಿದ್ದೇನೆ. ಬೈರತಿ, ಸೋಮಶೇಖರ್ರನ್ನ ನಾನು ಮುಂಬೈಗೆ ಕಳುಹಿದ್ದೇನೆ ಅಂತಾರೆ, ಹಾಗಾದರೆ ವಿಶ್ವನಾಥ, ನಾರಾಯಣಗೌಡ, ಗೋಪಾಲಯ್ಯರನ್ನ ಕಳುಹಿಸಿದ್ದು ಯಾರು?
ಹೆಚ್ಡಿಕೆ, ಹೆಚ್ಡಿಡಿ ನನ್ನ ಮೇಲೆ ಗೂಬೆ ಕೂರಿಸೋಕೆ ನೋಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ನನಗೇನು ಗೊತ್ತಿಲ್ಲ. ಇಂದು ಗುಲಾಂನಬಿ ಆಜಾದ್ ಅವರು ಬರುತ್ತಾರೆ ಎಂದು ಕೇಳಿದ್ದೆ. ಆದರೆ ನಾನು ನೆರೆ ಪೀಡಿತ ಪ್ರದೇಶಗಳ ಪ್ರವಾಸದಲ್ಲಿದ್ದೇನೆ ಎಂದರು.