ಲಿಂಗಾಯಿತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ನನ್ನ ಪಾತ್ರವಿಲ್ಲ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಅರಸೀಕೆರೆ, ಸೆ.21- ಲಿಂಗಾಯಿತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ನನ್ನ ಪಾತ್ರವಿಲ್ಲ, ಆದರೂ ವೀರಶೈವರು ಮತ್ತು ಲಿಂಗಾಯಿತರ ನಡುವೆ ನಡೆಯುತ್ತಿರುವ ಹೋರಾಟಕ್ಕೆ ನನ್ನ ಹೆಸರನ್ನು ಬಳಸಿಕೊಳ್ಳಲಾಯಿತು. ಹಾಗಾಗಿ ಜನಪರ ಕೆಲಸ ಮಾಡಿದರು ಮತ್ತೊಮ್ಮೆ ನಮ್ಮ ಸರಕಾರ ಅಧಿಕಾರಕ್ಕೆ ಬರುವಲ್ಲಿ ಹಾಗೂ ನಾನು ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಸಮ್ಮುಖದಲ್ಲಿ ತಮ್ಮ ಮನದಾಳದ ಮಾತನ್ನು ತೆರೆದಿಟ್ಟರು.

ತಾಲೂಕಿನ ಗೊಲ್ಲರಹಟ್ಟಿ ಗಂಗೇ ಮಡು ಕ್ಷೇತ್ರದಲ್ಲಿ ಕನಕ ಗುರು ಪೀಠ ಶಾಖಾ ಮಠದ ಭೂಮಿ ಪೂಜೆ ಮತ್ತು ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಬಸವ ತತ್ವದ ಅನುಯಾಯಿ ದೆಹಲಿಯ ಕರ್ನಾಟಕ ಭವನ ಸೇರಿದಂತೆ ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವ ಚಿತ್ರ ಹಾಕುವುದನ್ನು ಕಡ್ಡಾಯ ಮಾಡಿದ್ದು ನಾನೆ, ಅಲ್ಲದೇ ಅಕ್ಕಮಹಾದೇವಿ ಮತ್ತು ಕೆಂಪೇಗೌಡರ ಹೆಸರಿನಲ್ಲಿ ವಿಶ್ವವಿದ್ಯಾನಿಲಯ,

ಕೆಂಪೇಗೌಡರ ಹೆಸರಿನಲ್ಲಿ ಪ್ರಾಧಿಕಾರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಇಟ್ಟಿದ್ದು ಪ್ರಚಾರಕ್ಕಾಗಲಿ ಅಥವಾ ನನ್ನ ಸ್ವಾರ್ಥಕ್ಕಾಗಲಿ ಅಲ್ಲ. ಇಂತಹ ಮಹನೀಯರ ಜೀವನ ಚರಿತ್ರೆ ನಮ್ಮೆಲ್ಲರಿಗೂ ಆದರ್ಶವಾಗಲಿ ಎಂಬ ಸದುದ್ದೇಶದಿಂದ ಮಾತ್ರ, ಆದರೂ ನನ್ನನ್ನ ಅಹಿಂದಾ ವರ್ಗದ ನಾಯಕ ಎನ್ನುತ್ತಾರೆ ಇದಕ್ಕೆ ನನಗೇನು ಅಸಮದಾನವಿಲ್ಲ.

ಆದರೆ ನನ್ನ ಆಡಳಿತಾವದಿಯಲ್ಲಿ ಒಂದು ವರ್ಗ ಒಂದು ಸಮುದಾಯಕ್ಕೆ ಮಾತ್ರ ಯೋಜನೆಗಳನ್ನ ರೂಪಿಸಲಿಲ್ಲಾ ರಾಜ್ಯದ 6.5 ಕೋಟಿ ಜನರಿಗೆ ಒಂದಲ್ಲೊಂದು ಯೋಜನೆ ದೊರೆತಿದೆ ಎಂಬ ತೃಪ್ತಿ ಇದೆ ಎಂದು ಹೇಳಿದರು.

ಗಂಗೇಮಡು ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣ ವಾಗುತ್ತಿರುವ ಕಾಗಿನೆಲೆ ಶಾಖಾಮಠ ಕುರುಬ ಸಮಾಜಕ್ಕೆ ಮಾತ್ರ ಸೀಮಿತವಾಗದೇ ಇತರ ಸಣ್ಣ ಪುಟ್ಟ ಸಮುದಾಯಗಳ ಮಠವಾಗಿ ಆ ವರ್ಗದ ಜನತೆಗೆ ಮಾರ್ಗದರ್ಶನ ನೀಡುವಂತಾಗಲಿ. ಸರ್ವಧರ್ಮಿಯರ ಧಾರ್ಮಿಕ ಕೇಂದ್ರವಾಗಿ ಕ್ಷೇತ್ರ ಅಭಿವೃದ್ದಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಎತ್ತಿನಹೊಳೆ ಯೋಜನೆ ಅರಸೀಕೆರೆ ಸೇರಿದಂತೆ ಈ ಭಾಗದ ಹತ್ತಾರು ತಾಲೂಕಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆಯನ್ನ ನೀಗಿಸಲಿದ್ದು ಈ ಯೋಜನೆಗೆ ನಾನು ಮುಖ್ಯಮಂತ್ರಿಯಾಗಿದ್ದಾಗ 12 ಸಾವಿರ ಕೋಟಿ ಅನುದಾನವನ್ನ ನೀಡಿದೆ ಎಂದರು ತಿಳಿಸಿದರು.

ಕೋಡಿಮಠದ ಡಾ. ಶ್ರೀ ಶೀವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಹಾಲು ಮತ ಸಮಾಜವು ವೇಧ ಉಪನಿಷತ್ತು ಕಾಲದಿಂದಲೂ ಇದೆ. ದೇವರ ಮೇಲೆ ನಂಬಿಕೆ ಮತ್ತು ಭಕ್ತಿ ಇರಿಸಿಕೊಂಡಿರುವ ಈ ಸಮಾಜಕ್ಕೆ ಇತರೆ ಸಮಾಜಗಳ ವಿಶ್ವಾಸಕ್ಕೆ ಪಾತ್ರವಾಗಿರುವುದರಿಂದ ಹಾಲು ಕೆಟ್ಟರು ಹಾಲ ಮತ ಸಮಾಜ ಕೆಡುವುದಿಲ್ಲ ಎಂಬ ನಂಬಿಕೆಗೆ ಪಾತ್ರವಾಗಿದೆ ಎಂದರು.

ಸುಧೀರ್ಘ ರಾಜಕೀಯ ಜೀವನದಲ್ಲಿ ಅಧಿಕಾರ ಸಿಕ್ಕಾಗೆಲ್ಲಾ ಜನಪರ ಕೆಲಸ ಮಾಡಿರುವ ಸಿದ್ದರಾಮಯ್ಯರವರು ರಾಜ್ಯ ರಾಜಕಾರಣಕ್ಕೆ ಸೀಮಿತವಾಗದೆ ದೆಹಲಿಯತ್ತ ಮುಖ ಮಾಡಿದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಯಶಸ್ಸು ಕಾಣುಬಹು ದಾಗಿದೆ ಎಂದು ಸಿದ್ದರಾಮಯ್ಯಗೆ ಸ್ವಾಮೀಜಿ ಕಿವಿಮಾತು ಹೇಳಿದರು. ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮಾತನಾಡಿ, ರಾಜಕೀಯ ವಾಗಿ ನನ್ನ ಹಾಗೂ ಸಿದ್ದರಾಮಯ್ಯರವರ ನಡುವೆ ಭಿನ್ನಬಿಪ್ರಾಯ ವಿದ್ದರೂ, ವಯಕ್ತಿಕವಾಗಿ ಉತ್ತಮ ಸಂಬಂಧವಿದೆ ಎಂದು ಸಿದ್ದರಾಮಯ್ಯ ಕುರಿತು ಮೆಚ್ಚಿಗೆ ವ್ಯಕ್ತಪಡಿಸಿದರು.

ಶಾಸಕ ಕೆ ಎಂ ಶಿವಲಿಂಗೇಗೌಡ ಮಾತನಾಡಿ, ಕ್ಷೇತ್ರದ ಅಭಿವೃದ್ದಿ ಹಾಗೂ ನನ್ನ ರಾಜಕೀಯ ಏಳಿಗೆ ಹಿಂದೆ ಮಾಜಿ ಸಚಿವರು ನಮ್ಮ ಪಕ್ಷದ ನಾಯಕರಾದ ಹೆಚ್.ಡಿ. ರೇವಣ್ಣರವರ ಸಹಕಾರವಿದೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸಹಕಾರ ಮತ್ತು ಮಾರ್ಗದರ್ಶನವಿದೆ ಎಂದರು.

ಗಂಗೆಮಡು ಧಾರ್ಮಿಕ ಕ್ಷೇತ್ರದ ಅಭಿವೃದ್ದಿಗೆ 50 ಲಕ್ಷ ಹಾಗೂ ನಗರ ವ್ಯಾಪ್ತಿಯಲ್ಲಿ ಕುರುಬ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ನೀಡುವುದಾಗಿ ಘೋಷಿಸಿದರು.
ಕೆಆರ್ ಪೇಟೆ ಕಾಗಿನೆಲೆ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ, ಮಾಜಿ ಸಚಿವ ಹೆಚ್.ಎಂ. ರೇವಣ್ಣ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಗೊಲ್ಲರಹಳ್ಳಿ ಪಟೇಲ್ ಶಿವಣ್ಣ ಮಾತನಾಡಿದರು.

ದೊಡ್ಡಗುಣಿ ಮಠದ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ, ಶಾಸಕರಾದ ಬಾಲಕೃಷ್ಣ , ಲಿಂಗೇಶ್, ಮಾಜಿ ಸಚಿವ ಬಿ.ಶಿವರಾಂ, ಮಾಜಿ ಶಾಸಕ ಪರಮೇಶ್ವರಪ್ಪ, ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಮಾಜಿ ಎಂ ಎಲ್‍ಸಿ ಗಾಯಿತ್ರಿ ಶಾಂತೇಗೌಡ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ, ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Facebook Comments