ಅನರ್ಹರಿಗೆ ಯಡಿಯೂರಪ್ಪ ನೀಡಿದ್ದ ಭರವಸೆ ಏನಾಯ್ತು..? : ಸಿದ್ದರಾಮಯ್ಯ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

ರಾಯಚೂರು,ಅ.1- ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಜೆಡಿಎಸ್-ಕಾಂಗ್ರೆಸ್‍ನ ಸದಸ್ಯರಿಗೆ ಸಚಿವರಾಗಿ ತಾವು ಮುಖ್ಯಮಂತ್ರಿಯಾಗುವ ವೇಳೆಯಲ್ಲೇ ಪ್ರಮಾಣ ವಚನ ಬೋಧಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ ಅದು ಎಲ್ಲಿ ಈಡೇರಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಚನೆಗೆ ಅನುಕೂಲವಾಗುವಂತೆ 17 ಮಂದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಆ ವೇಳೆ ಅವರಿಗೆ ಹಲವು ರೀತಿಯ ಆಮಿಷಗಳನ್ನು ಒಡ್ಡಲಾಗಿತ್ತು. ತಾವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲೇ ರಾಜೀನಾಮೆ ನೀಡಿದವರಿಗೂ ಸಚಿವರಾಗಿ ಪ್ರಮಾಣವಚನ ತೆಗೆದುಕೊಳ್ಳಲು ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು ಮತ್ತು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಹೇಳಿದ್ದರು. ಆದರೆ ಅದು ಈಡೇರಿದೆಯೇ ಎಂದು ಪ್ರಶ್ನೆ ಮಾಡಿದರು.

ಕಾಂಗ್ರೆಸ್ ಕಾನೂನು ಪ್ರಕಾರ ಕ್ರಮ ಕೈಗೊಂಡಿದೆ. ಒಟ್ಟಾರೆ ಅಷ್ಟೂ ಮಂದಿ ರಾಜೀನಾಮೆ ಕೊಟ್ಟು ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರೊಂದಿಗೆ ವಿಮಾನದಲ್ಲಿ ಮುಂಬೈಗೆ ಹೋಗಿದ್ದರು. ಒಟಾಗಿ ಎಲ್ಲರೂ ಹೋಟೆಲ್‍ನಲ್ಲಿದ್ದರು. ಇದೆಲ್ಲ ಪಕ್ಷಾಂತರವಲ್ಲದೇ ಮತ್ತೇನು? ಶಾಸಕ ಸ್ಥಾನ ನಿರ್ವಹಣೆ ಮಾಡಲು ಸಾಧ್ಯವಾಗದೆ ಇದ್ದರೆ ಅಥವಾ ಜನರ ಸಮಸ್ಯೆಗಳಿಗಾಗಿ ರಾಜೀನಾಮೆ ನೀಡಿದ್ದರೆ ಒಪ್ಪಿಕೊಳ್ಳಬಹುದಿತ್ತು.

ಆದರೆ ಅವರ ನಡವಳಿಕೆಗಳಿಂದ ಪಕ್ಷಾಂತರ ನಡೆದಿರುವುದು ಸ್ಪಷ್ಟವಾಗಿದೆ. ಹೀಗಾಗಿ ಸ್ಪೀಕರ್‍ರವರು ಕಾಂಗ್ರೆಸ್ ದೂರು ಆಧರಿಸಿ ಕ್ರಮ ಕೈಗೊಂಡಿದ್ದಾರೆ. ಸುಪ್ರೀಂಕೋರ್ಟ್‍ನಲ್ಲೂ ಸ್ಪೀಕರ್ ತೀರ್ಪನ್ನು ಎತ್ತಿಹಿಡಿಯುವ ಸಾಧ್ಯತೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಬೆಂಗಳೂರಿಗೆ ಬಂದರೂ ನೆರೆ ಸಂತ್ರಸ್ತರ ಕಷ್ಟ ಕೇಳಿಲ್ಲ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ರಸ್ತೆಗಳು ಕೊಚ್ಚಿಹೋಗಿವೆ, ಮನೆಗಳು ಬಿದ್ದು ಹೋಗಿವೆ. ಜನರಿಗೆ ತೊಂದರೆಯಾಗಿದೆ ಎಂದರು.

2009ರ ಪ್ರವಾಹದಲ್ಲಿ ತೊಂದರೆಗೀಡಾದವರಿಗೆ ಪುನರ್ವಸತಿ ಕಲ್ಪಿಸಲು ನಿರ್ಮಿಸಿಕೊಟ್ಟಿದ್ದ ಮನೆಗಳು ಚಿಕ್ಕದಾಗಿವೆ. ರೈತರಿಗೆ ಜಾನುವಾರು ಸಾಕಿಕೊಳ್ಳಲು ಮತ್ತು ಕೃಷಿ ಚಟುವಟಿಕೆಗಾಗಿ ನಿವೇಶನ ದೊಡ್ಡದಿರಬೇಕು. ಸರ್ಕಾರ ಕೇವಲ 2530 ಅಳತೆಯ ನಿವೇಶನ ನೀಡಿತ್ತು. ಅದಕ್ಕೆ ಯಾರೂ ಹೋಗಿರಲಿಲ್ಲ. ಸೂಕ್ತ ಸೌಲಭ್ಯ, ದೊಡ್ಡ ನಿವೇಶನ ಕೊಟ್ಟರೆ ಅಲ್ಲಿಗೆ ಸ್ಥಳಾಂತರಗೊಳ್ಳಲು ಬಹಳಷ್ಟು ರೈತರು ಸಿದ್ದರಿದ್ದಾರೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು.

ಸಾಲಮನ್ನಾ ಸೇರಿದಂತೆ ಹಲವಾರು ಯೋಜನೆಗಳನ್ನು ಬಿಜೆಪಿ ಸರ್ಕಾರ ಮೂಲೆಗುಂಪು ಮಾಡುತ್ತಿದೆ. ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸಂಪನ್ಮೂಲ ಕ್ರೂಢೀಕರಣ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಹಿಂದಿನ ಸರ್ಕಾರಗಳು ಜಾರಿಗೆ ತಂದ ಜನಪರ ಯೋಜನೆಗಳನ್ನು ರದ್ದು ಮಾಡುವುದು ಸರಿಯಲ್ಲ ಎಂದರು.

ನೆರೆ ಹಾಗೂ ಬರ ಪರಿಸ್ಥಿತಿ ಚರ್ಚೆಗಾಗಿ 20 ದಿನಗಳ ಕಾಲ ಅಧಿವೇಶನ ನಡೆಸಬೇಕು. ಅದು ಬೆಳಗಾವಿಯಲ್ಲೇ ಅಧಿವೇಶನ ನಡೆಯಬೇಕು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

Facebook Comments