ವರಸೆ ಬದಲಾಯಿಸಿದ ಸಿದ್ದರಾಮಯ್ಯ, ಹೈಕಮಾಂಡ್ ಷರತ್ತಿಗೆ ಎಚ್ಚರಿಕೆಯ ಹೆಜ್ಜೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.12- ಪ್ರತಿಪಕ್ಷದ ನಾಯಕರಾದ ಮೇಲೆ ಸಿದ್ದರಾಮಯ್ಯ ತಮ್ಮ ವರಸೆ ಬದಲಾಯಿಸಿದ್ದಾರೆ. ಎಲ್ಲ ಶಾಸಕರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ. ಕಳೆದೆರಡು ದಿನಗಳಲ್ಲಿ ಐದು ಬಾರಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಅಧಿವೇಶನದಲ್ಲಿ ಹಿರಿಯ ಮುಖಂಡರಾದ ಎಚ್.ಕೆ.ಪಾಟೀಲ್, ರಮೇಶ್‍ಕುಮಾರ್ ಹಾಗೂ ಶಾಸಕರ ಸಲಹೆ ಪಡೆದು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಪ್ರತಿಪಕ್ಷದ ನಾಯಕ ಸ್ಥಾನ ಪಡೆಯಲು ಸಿದ್ದರಾಮಯ್ಯನವರು ನಡೆಸಿದ ಪ್ರಯತ್ನದ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆಂದು ಹೈಕಮಾಂಡ್ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಸಿದ್ದು ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದಾರೆ.

ಇವರ ಆಪ್ತರು ಹಾಗೂ ಹಿರಿಯ ಮುಖಂಡರಾದ ರಮೇಶ್‍ಕುಮಾರ್ ಕೂಡ ಸದಾ ಎಚ್ಚರಿಸುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರು ಯಾವುದೇ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿಲ್ಲ. ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಚರ್ಚೆಗೆ ಮುಂದಾಗುತ್ತಿದ್ದಾರೆ. ಪ್ರತಿಪಕ್ಷ ಬಿಜೆಪಿಯನ್ನು ಯಾವ ರೀತಿ ಕಟ್ಟಿಹಾಕಬೇಕೆಂಬ ಸಲಹೆಗಳನ್ನು ಪಡೆದು ಹೆಜ್ಜೆ ಇಡುತ್ತಿದ್ದಾರೆ.

ಮುಂಬರುವ ಉಪಚುನಾವಣೆಯ ಹೊಣೆ ಕೂಡ ಇವರ ಹೆಗಲ ಮೇಲಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚಿನ ಸ್ಥಾನಗಳನ್ನು ಪಡೆಯುವುದು ಇವರ ಉದ್ದೇಶವಾಗಿದೆ. ಈಗಾಗಲೇ ಹಿರಿಯ ಕಾಂಗ್ರೆಸ್ ನಾಯಕರು ಇವರ ವಿರುದ್ಧ ಕತ್ತಿ ಮಸೆದಿದ್ದರು. ಅಲ್ಲದೆ ಹೈಕಮಾಂಡ್‍ಗೆ ದೂರು ಕೂಡ ನೀಡಿದ್ದರು. ಹಾಗಾಗಿ ಅವೆಲ್ಲವನ್ನೂ ಸಿದ್ದು ಮೆಟ್ಟಿ ನಿಲ್ಲಬೇಕಾದ ಹಿನ್ನೆಲೆಯಲ್ಲಿ ಈಗ ತಮ್ಮ ವರಸೆ ಬದಲಿಸಿ ಎಲ್ಲರೊಟ್ಟಿಗೆ ಹೆಜ್ಜೆ ಹಾಕುತ್ತಿದ್ದಾರೆ.

Facebook Comments