ಸಿದ್ದು ವಿರುದ್ಧ ಬಿಜೆಪಿ ಟೀಕಾ ಪ್ರಹಾರ, ಒಳಗೊಳಗೇ ಖುಷಿ ಪಟ್ಟ ಕೈ ಪಡೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,: – ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ತೀವ್ರ ಸ್ವರೂಪದ ವಾಗ್ದಾಳಿಗೆ ಕಾಂಗ್ರೆಸ್‍ನಿಂದ ಯಾವ ಪ್ರಮುಖರು ಪ್ರತಿಕ್ರಿಯೆ ನೀಡದೆ ಇರುವುದು ಮೂಲ ಕಾಂಗ್ರೆಸ್ಸಿಗರಿಗೆ ಒಳಗೊಳಗೇ ಖುಷಿ ಕೊಟ್ಟಂತಿದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ವೀರಸಾವರ್ಕರ್ ಅವರಿಗೆ ಭಾರತರತ್ನ ನೀಡುವ ಭರವಸೆಯನ್ನು ಪ್ರಕಟಿಸಿದೆ. ಇದು ತೀವ್ರ ವಿವಾದಕ್ಕೆ ಗುರಿಯಾಗಿದೆ. ನೆರೆ ರಾಜ್ಯದ ವಿದ್ಯಮಾನವನ್ನು ರಾಜ್ಯದಲ್ಲಿ ಅತ್ಯಂತ ಗಂಭೀರ ಸಮಸ್ಯೆ ಎಂಬಂತೆ ಚರ್ಚೆ ನಡೆಸಲಾಗುತ್ತಿದೆ.

ವೀರ ಸಾವರ್ಕರ್ ಅವರ ಇತಿಹಾಸ ಸೇರಿದಂತೆ ಹಲವಾರು ಮಹತ್ವದ ಅಂಶಗಳನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿ ಸಾರ್ವಜನಿಕ ಭಾಷಣಗಳಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ವೀರ ಸಾವರ್ಕರ್ ಅವರನ್ನು ಟೀಕಿಸುತ್ತಿದ್ದಂತೆ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದಿದ್ದಾರೆ. ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ಶ್ರೀರಾಮುಲು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಡಿ.ವಿ.ಸದಾನಂದಗೌಡ, ಸಂಸದರಾದ ಜಿ.ಎಂ..ಸಿದ್ದೇಶ್ವರ್, ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಹಲವಾರು ಮಂದಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿಗಿಳಿದಿದ್ದಾರೆ.

ಸಿದ್ದರಾಮಯ್ಯ ಅವರ ಮಗನ ಸಾವು, ಅಧಿಕಾರ ಕಳೆದುಕೊಂಡ ನಂತರ ಬುದ್ಧಿಭ್ರಮಣೆಯಾಗಿದೆ, ನೀವು ಭೂಮಿ ಮೇಲೆ ಬದುಕಿರಲೇಬಾರದು, ಸಿದ್ದರಾಮಯ್ಯ ದೇಶದ್ರೋಹಿ ಎಂಬಷ್ಟು ಕಠೋರ ಶಬ್ಧಗಳನ್ನು ಬಳಸಿ ವೈಯಕ್ತಿಕ ನಿಂದನೆ ಮಾಡಿದ್ದರೂ ಕಾಂಗ್ರೆಸ್ ನಾಯಕರ್ಯಾರೂ ಬಾಯಿಬಿಡುತ್ತಿಲ್ಲ.  ಕೆಲವರಂತೂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ವಾಗ್ದಾಳಿಯನ್ನು ಕೇಳಿ ಒಳಗೊಳಗೇ ಖುಷಿ ಅನುಭವಿಸುತ್ತಿರುವಂತಿದೆ.

ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕ ಸ್ಥಾನ ತಪ್ಪಿಸಲು ಮೂಲ ಕಾಂಗ್ರೆಸ್ಸಿಗರು ಸಾಕಷ್ಟು ಹರಸಾಹಸ ನಡೆಸಿದರು. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗಿಂತ ಪ್ರಭಾವಿ ನಾಯಕರು ಕಾಣಸಿಗದ ಹಿನ್ನೆಲೆಯಲ್ಲಿ ಹಾಗೂ ಪ್ರಭಾವಿ ಎನಿಸಿಕೊಂಡಂತಹ ನಾಯಕರುಗಳಿಗೆ ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆನ್ನು ಹತ್ತಿದ್ದರಿಂದಾಗಿ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಅವರನ್ನೇ ಹೈಕಮಾಂಡ್ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿತ್ತು.

ಸಿದ್ದರಾಮಯ್ಯ ಅವರಿಗೆ ಅವಕಾಶ ತಪ್ಪಿಸಲು ಸಾಕಷ್ಟು ಪ್ರಯತ್ನಿಸಿ ವಿಫಲರಾದ ಕಾಂಗ್ರೆಸ್ ನಾಯಕರು ಇದರಿಂದ ಅಸಮಾಧಾನಗೊಂಡಿದ್ದರು. ಈ ಪ್ರತಿರೋಧವನ್ನು ಜೀರ್ಣಿಸಿಕೊಂಡೇ ಸಿದ್ದರಾಮಯ್ಯ ತಮ್ಮ ಕರ್ತವ್ಯವನ್ನು ಮುಂದುವರೆಸಿದ್ದು, ರಾಜ್ಯಾದ್ಯಂತ ಪ್ರವಾಸಕ್ಕಿಳಿದಿದ್ದಾರೆ.

ಬಿಜೆಪಿಯ ವಿರುದ್ಧ ಸಮಯ ಸಿಕ್ಕಾಗಲೆಲ್ಲಾ ಟೀಕೆ ಮಾಡುತ್ತಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಲ್ಲಿನ ನೆರೆ ಪರಿಸ್ಥಿತಿ ಬಗ್ಗೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದಾಗ ಪ್ರತ್ಯುತ್ತರ ನೀಡಲಾಗದೆ ಮೌನವಾಗಿದ್ದ ಬಿಜೆಪಿ ನಾಯಕರು, ವೀರ ಸಾವರ್ಕರ್ ವಿಷಯದಲ್ಲಿ ಹೇಳಿಕೆ ನೀಡಿದ್ದಂತೆ ರೊಚ್ಚಿಗೆದ್ದು ತಿರುಗೇಟು ನೀಡಲಾರಂಭಿಸಿದ್ದಾರೆ. ಈ ಹಿಂದಿಗಿಂತಲೂ ಹೀನಾಯವಾಗಿ ವೈಯಕ್ತಿಕ ನೆಲೆಯಲ್ಲಿ ಟೀಕಿಸುತ್ತಿದ್ದಾರೆ.

ಕಾಂಗ್ರೆಸ್‍ನ ನಾಯಕರು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲಬೇಕಿತ್ತು. ಆದರೆ ಯಾರೂ ಮಾತನಾಡುತ್ತಿಲ್ಲ. ಬಿಜೆಪಿಯ ಹತ್ತಾರು ನಾಯಕರು ಸಿದ್ದರಾಮಯ್ಯ ಅವರನ್ನು ಹಣ್ಣುಗಾಯಿ, ನೀರುಗಾಯಿ ಮಾಡುತ್ತಿದ್ದರೆ ಕಾಂಗ್ರೆಸ್ಸಿಗರು ತಮಗೂ ಅದಕ್ಕೂ ಸಂಬಂಧವಿಲ್ಲವೆಂಬಂತೆ ಮೌನಕ್ಕೆ ಶರಣಾಗುವ ಮೂಲಕ ಬಿಜೆಪಿ ನಾಯಕರಿಗೆ ಪರೋಕ್ಷ ಬೆಂಬಲ ನೀಡಿದಂತೆ ವರ್ತಿಸುತ್ತಿದ್ದಾರೆ. ಇದು ಕಾಂಗ್ರೆಸ್‍ನಲ್ಲಿನ ಒಳಬೇಗುದಿಯನ್ನು ಹೊರ ಹಾಕಿದಂತೆ ಕಂಡುಬರುತ್ತಿದೆ.

Facebook Comments