ಸಿದ್ದರಾಮಯ್ಯಗೆ ಅಜ್ಜಿ ತರಾಟೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬಾದಾಮಿ, ಅ.23- ತಾಲೂಕಿನ ಕಿತ್ತಲಿ ಗ್ರಾಮದ ನೆರೆ ಸಂತ್ರಸ್ತರನ್ನು ಭೇಟಿ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ತಾಲೂಕಿನ ನೆರೆ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಇಂದು ಕಿತ್ತಲಿ ಗ್ರಾಮಕ್ಕೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದರು.

ಈ ವೇಳೆ ಅವರ ಕಾರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ವೋಟು ಕೇಳಲು ಬರುತ್ತೀರಿ. ಆಮೇಲೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು. ವೃದ್ಧೆ ರಾಜವ್ವ ತಳವಾರ್ ಎಂಬುವರು ನಾವಿಲ್ಲಿ ಕಾಯ್ತಾ ಇದ್ದೀವಿ.

ನೀವಿಲ್ಲಿ ಏನು ಮಾಡ್ತಿದ್ದೀರಿ. ಸೂರೂ ಇಲ್ಲ, ಯಾವುದೇ ಸೌಲಭ್ಯಗಳಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು. ನೆರೆಯಿಂದ ತತ್ತರಿಸಿ ಹೋಗಿದ್ದೇವೆ. ಮನೆ, ಮಠ ಕಳೆದುಕೊಂಡಿದ್ದೇವೆ. ನೆರವು ನೀಡಬೇಕಾದವರು ಇತ್ತ ಮುಖ ಮಾಡುತ್ತಲೇ ಇಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಸಂಬಂಧ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ನಿಮಗೆ ಅಗತ್ಯ ಸೌಲಭ್ಯ ನೀಡಲು ಸೂಚಿಸುತ್ತೇನೆ ಎಂದು ಭರವಸೆ ನೀಡಿದರು. ನಂತರ ಅವರು ಗ್ರಾಮವನ್ನು ಪರಿಶೀಲಿಸಲು ಅನುವು ಮಾಡಿಕೊಟ್ಟರು.

Facebook Comments