ಅಡ್ಡಕತ್ತರಿಯಲ್ಲಿ ಸಿಲುಕಿದ ಸಿದ್ದರಾಮಯ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.7- ಮಂಡ್ಯ ಜಿಲ್ಲೆಯಲ್ಲಿ ಉಂಟಾಗಿರುವ ಅಸಮಾಧಾನ ನಿವಾರಿಸಿ ಮೈತ್ರಿಕೂಟದ ಅಭ್ಯರ್ಥಿಗೆ ಒಮ್ಮತದ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಭೆಯಲ್ಲಿ ಒಮ್ಮತ ವ್ಯಕ್ತವಾಗದೆ ಆಕ್ರೋಶ ಕೇಳಿಬಂದಿದೆ. ಹೀಗಾಗಿ ಸಿದ್ದರಾಮಯ್ಯನವರು ಅಡ್ಡಕತ್ತರಿಯಲ್ಲಿ ಸಿಲುಕಿದ್ದಾರೆ.

ಮೈತ್ರಿಕೂಟದ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಜೆಡಿಎಸ್ ಅಭ್ಯರ್ಥಿ ವಿರುದ್ಧವಾಗಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಬಹಿರಂಗ ಪ್ರಚಾರ ನಡೆಸುತ್ತಿದ್ದಾರೆ.

ಪ್ರಚಾರದ ವೇಳೆ ಕಾಂಗ್ರೆಸ್ ಬಾವುಟವನ್ನು ಪ್ರದರ್ಶಿಸಲಾಗುತ್ತಿದೆ. ಇದನ್ನು ನಿಯಂತ್ರಿಸಲು ಕಾಂಗ್ರೆಸಿಗರು ಹರಸಾಹಸಪಟ್ಟರೂ ಪ್ರಯೋಜನವಾಗಿಲ್ಲ. ಮೈತ್ರಿ ಅಭ್ಯರ್ಥಿಯ ವಿರುದ್ಧವಾಗಿ ಕೆಲಸ ಮಾಡುವವರು ಪಕ್ಷ ಬಿಟ್ಟು ಹೋಗಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.

ಆದರೂ ಮಂಡ್ಯದ ಕಾಂಗ್ರೆಸ್ ಕಾರ್ಯಕರು ಕ್ಯಾರೆ ಎನ್ನುತ್ತಿಲ್ಲ. ಮಾಜಿ ಶಾಸಕ ಚೆಲುವರಾಯಸ್ವಾಮಿ ಮತ್ತಿತರ ಜೆಡಿಎಸ್ ಮುಖಂಡರು ತಮ್ಮನ್ನು ಪ್ರಚಾರಕ್ಕೆ ಕರೆದಿಲ್ಲ. ಹಾಗಾಗಿ ತಾವು ಹೋಗುತ್ತಿಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ರಾಜಕಾರಣದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ಕಾಂಗ್ರೆಸ್, ಬಿಜೆಪಿ, ರೈತ ಸಂಘಗಳೂ ಸೇರಿ ಎಲ್ಲರೂ ಚಕ್ರವ್ಯೂಹ ರಚಿಸಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.

ಪರಿಸ್ಥಿತಿಯನ್ನು ತಿಳಿಗೊಳಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ, ಮೈಸೂರು, ಚಾಮರಾಜನಗರ ಕ್ಷೇತ್ರಗಳಲ್ಲಿ ಜಂಟಿ ಪ್ರಚಾರ ನಡೆಸಲು ಮುಂದಾಗಿದ್ದಾರೆ.

ಆದರೆ ಜಂಟಿ ಪ್ರಚಾರ ಕೂಡ ಫಲ ನೀಡಲಿದೆ ಎಂಬ ನಂಬಿಕೆ ಮಿತ್ರಕೂಟದ ಪಕ್ಷಗಳಲ್ಲಿಲ್ಲ. ಹಾಗಾಗಿ ಸಿದ್ದರಾಮಯ್ಯಇಂದು ಜಿಲ್ಲೆಯ ಪ್ರಮುಖ ನಾಯಕರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಮಂಡ್ಯ ಜಿಲ್ಲೆಯ ನಾಯಕರು ರಾಜ್ಯದಲ್ಲಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿರುವ ಸಿದ್ದರಾಮಯ್ಯನವರು, ಮಂಡ್ಯ ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಲ್ಲೇಬೇಕು. ಇದು ಒಂದು ಕ್ಷೇತ್ರದ ಪ್ರಶ್ನೆಯಲ್ಲ. ದೇಶದ ಹಿತಾಸಕ್ತಿಯ ಪ್ರಶ್ನೆ. ಹಾಗಾಗಿ ಎಲ್ಲ ನಾಯಕರು ಒಟ್ಟಾಗಿ ಮೈತ್ರಿ ಅಭ್ಯರ್ಥಿ ನಿಖಿಲ್ ಪರವಾಗಿ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದಾರೆ.

ಮಂಡ್ಯದಲ್ಲಿನ ಅಸಮಾಧಾನ ತಿಳಿಗೊಳಿಸಲು ಸಿದ್ದರಾಮಯ್ಯನವರು ರಂಗಪ್ರವೇಶ ಮಾಡುವ ವೇಳೆಗೆ ಸಾಕಷ್ಟು ವಿಳಂಬವಾಗಿದೆ. ಜಿಲ್ಲೆಯ ನಾಯಕರು ಈಗಾಗಲೇ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಬಹಿರಂಗ ಪ್ರಚಾರದಲ್ಲಿ ತೊಡಗಿದ್ದಾರೆ.

ಚುನಾವಣೆಗೆ ಕೇವ 10 ದಿನಗಳ ಮಾತ್ರ ಬಾಕಿ ಉಳಿದಿದ್ದು ಕೊನೆಯ ಹಂತದಲ್ಲಿ ಸಿದ್ದರಾಮಯ್ಯನವರ ಸಂಧಾನ ಸಭೆ ಎಷ್ಟರಮಟ್ಟಿಗೆ ಫಲ ನೀಡಲಿದೆ ಎಂಬ ಅನುಮಾನ ಹುಟ್ಟುಹಾಕಿದೆ. ಮಂಡ್ಯ ಕ್ಷೇತ್ರದಲ್ಲಿ ಆರಂಭದಿಂದಲೂ ಮೈತ್ರಿ ಬಗ್ಗೆ ವಿರೋಧ ವ್ಯಕ್ತವಾಗುತ್ತಲೇ ಇತ್ತು. ಮೊದಲ ಬಾರಿಗೆ ಸಭೆ ನಡೆಸಿದಾಗಲೇ ಕಾಂಗ್ರೆಸ್ ನಾಯಕರು ತಾವು ಜೆಡಿಎಸ್ ಪರ ಕೆಲಸ ಮಾಡುವುದಿಲ್ಲ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದರು.

ಇದಕ್ಕೂ ಮೊದಲು ಜಲಸಂಪನ್ಮೂಲ ಡಿ.ಕೆ.ಶಿವಕುಮಾರ್ ಕೂಡ ಎರಡುಮೂರಿ ಸಂಧಾನಸಭೆ ನಡೆಸಲು ಪ್ರಯತ್ನಿಸಿ ಪ್ರಯೋಜನವಾಗದೆ ಕೈಚೆಲ್ಲಿದ್ದರು. ಮೇಲ್ನೋಟಕ್ಕೆ ನಾಯಕರುಗಳು ಸಂಧಾನ ಸಭೆಗೆ ಒಪ್ಪಿದಂತೆ ಮಾತನಾಡುತ್ತಿದ್ದು, ಕ್ಷೇತ್ರದಲ್ಲಿ ಪಕ್ಷೇತರ ಪರ ಅಭ್ಯರ್ಥಿ ಪರವಾಗಿ ಕೆಲಸ ನಡೆಯುತ್ತಿದೆ.

ನಾಯಕರ್ಯಾರು ಬಹಿರಂಗವಾಗಿ ಕಾಣಿಸಿಕೊಳ್ಳದೆ ಇದ್ದರೂ ಮೈತ್ರಿ ಅಭ್ಯರ್ಥಿಯ ವಿರುದ್ಧವಾಗಿಯೇ ಪ್ರಚಾರ ನಡೆಯುತ್ತಿದೆ. ಆರಂಭದಲ್ಲಿ ಡಿ.ಕೆ.ಶಿವಕುಮಾರ್ ಸಂಧಾನ ಸಭೆ ನಡೆಸಿದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಎಚ್ಚೆತ್ತುಕೊಂಡಿದ್ದರೆ ಪರಿಸ್ಥಿತಿ ಇಷ್ಟು ಕೈ ಮೀರುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ರಾಹುಲ್ ಗಾಂಧಿ ಅವರು ಮೈತ್ರಿ ಧರ್ಮ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಮೇಲೆ ಸಿದ್ದರಾಮಯ್ಯನವರು ಅಸಮಾಧಾನ ಹೆಚ್ಚಿರುವ ಕ್ಷೇತ್ರಗಳ ಮುಖಂಡರ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಮೈಸೂರಿನಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಎಲ್ಲವೂ ಸರಿ ಹೋಗಿದೆ ಎಂಬ ಸಂದೇಶ ನೀಡಿದ್ದಾರೆ. ಆದರೆ ಚಾಮರಾಜನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಮಂಡ್ಯದಲ್ಲಿನ ಕಾಂಗ್ರೆಸ್ ಕಿಚ್ಚು ತಣ್ಣಗಾಗುವುದೋ ಇಲ್ಲವೋ ಎಂಬುದು ನಿಗೂಢವಾಗಿಯೇ ಉಳಿದಿದೆ. ಎಲ್ಲವೂ ವಿಪರೀತಕ್ಕೋದ ಮೇಲೆ ನಡೆಸುತ್ತಿರುವ ಸಂಧಾನ ಸಭೆ ಫಲ ನೀಡುವುದೋ, ನಿಖಿಲ್‍ಗೆ ಅದು ಲಾಭವಾಗುವುದೋ ಕಾದು ನೋಡಬೇಕಿದೆ.

Facebook Comments

Sri Raghav

Admin