ನನ್ನ ಹೇಳಿಕೆಗೆ ನಾನು ಬದ್ಧ, ಯಡಿಯೂರಪ್ಪ ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆಯೇ..? : ಸಿದ್ದು ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.5- ಸಮ್ಮಿಶ್ರ ಸರ್ಕಾರದ ಅಸ್ಥಿತ್ವ ಕುರಿತು ನೀಡಿದ್ದ ಹೇಳಿಕೆಗಳಿಗೆ ನಾನು ಬದ್ಧನಾಗಿದ್ದೇನೆ. ಅದೇ ರೀತಿ ಯಡಿಯೂರಪ್ಪ ಅವರು ಕೋರ್‌ಕಮಿಟಿ ಸಭೆಯಲ್ಲಿ ನೀಡಿದ್ದ ಹೇಳಿಕೆ ಬಗ್ಗೆ ಬದ್ಧರಾಗಿದ್ದಾರೆಯೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿರುವ ಅವರು, ಇಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.

ನಾನು ಧರ್ಮಸ್ಥಳದ ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುವಾಗ ಅಭಿಮಾನಿಯೊಬ್ಬರು ಬಂದಿದ್ದರು. ಕಾಗ್ರೆಸ್‌ನ 80 ಶಾಸಕರಿದ್ದರೂ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಯಿತು ಎಂದು ವಿಷಾದ ವ್ಯಕ್ತಪಡಿಸಿದಾಗ ಅವರನ್ನು ನಾನು ಸಮಾಧಾನಪಡಿಸಿದೆ. ಸಂಸತ್ ಚುನಾವಣೆವರೆಗೂ ತಾಳ್ಮೆಯಿಂದ ಇರಿ. ಅನಂತರ ಕುಳಿತು ಮಾತನಾಡೋಣ ಎಂದಿದ್ದೆ. ಅದರಲ್ಲಿ ಏನು ತಪ್ಪಿದೆ ಎಂದರು.

ನಾನು ನನ್ನ ಹೇಳಿಕೆಗಳಿಗೆ ಬದ್ಧನಾಗಿದ್ದೇನೆ. ಅದೇ ರೀತಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿಯ ಕೋರ್‌ಕಮಿಟಿ ಸಭೆಯಲ್ಲಿ ನೀಡಿದ್ದ ಹೇಳಿಕೆಗಳಿಗೆ ಬದ್ಧರಾಗಿದ್ದಾರೆಯೇ ಎಂದು ಪ್ರಶ್ನಿಸಿದರು. ಆಡಿಯೋದಲ್ಲಿ ದಾಖಲಾಗಿರುವ ಮಾತುಗಳನ್ನು ತಾವೇ ಆಡಿರುವುದಾಗಿ ಯಡಿಯೂರಪ್ಪ ಒಪ್ಪಿಕೊಂಡಿದ್ದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೈದ ಮೇಲೆ ಮಾತು ಬದಲಾಯಿಸಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಆಡಿಯೋವನ್ನು ರೆಕಾರ್ಡ್ ಮಾಡಿದ್ದಾಗಲಿ, ಬಿಡುಗಡೆ ಮಾಡಿದವರಾಗಲಿ ಕಾಂಗ್ರೆಸಿನವರಲ್ಲ. ಅದಕ್ಕೂ ನಮಗೂ ಸಂಬಂಧವಿಲ್ಲ. ಯಡಿಯೂರಪ್ಪ ಅವರ ಸರ್ಕಾರವನ್ನು ಬೀಳಿಸಬೇಕು. ಕೆಟ್ಟ ಹೆಸರು ತರಬೇಕು ಎಂಬ ಕಾರಣಕ್ಕಾಗಿ ಬಿಜೆಪಿಯವರೇ ಈ ಕೆಲಸ ಮಾಡಿಸಿದ್ದಾರೆ. ತಮ್ಮ ಆಡಿಯೋ ಬಿಡುಗಡೆಯಿಂದ ನನಗಾಗಲಿ, ನನ್ನ ಪಕ್ಷಕ್ಕಾಗಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ನಾನು ಯಾವುದೇ ಸಂದರ್ಭದಲ್ಲೂ ಪ್ರಯತ್ನಪಟ್ಟಿಲ್ಲ. ಬಿಜೆಪಿಯವರು ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಂಡು ಸರ್ಕಾರ ಬೀಳಿಸಿದ್ದಾರೆ. ಈಗ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 12 ಸ್ಥಾನಗಳನ್ನು ಗೆದ್ದೇ ಗೆಲ್ಲಲ್ಲಿದೆ. ೧೫ ಸ್ಥಾನಗಳನ್ನು ಗೆಲ್ಲಲ್ಲು ನಾವು ಪ್ರಯತ್ನ ನಡೆಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಮೇಲೆ ಪ್ರೀತಿ ಬಂದಿರುವುದಕ್ಕೆ ನಾನು ಏನು ಹೇಳಲು ಸಾಧ್ಯವಿಲ್ಲ. ಅವರ ಮನಸ್ಸಿನಲ್ಲಿ ಏನು ಇದೆಯೋ ಗೊತ್ತಿಲ್ಲ ಎಂದರು.

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಿರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿರ್ಧರಿಸಿರುವುದನ್ನು ನಾನು ಸ್ವಾಗತಿಸುತ್ತೇನೆ. ಈ ಒಪ್ಪಂದದ ಬಗ್ಗೆ 2012 ರಿಂದಲೂ ಚರ್ಚೆ ನಡೆಯುತಿತ್ತು. ಹಿಂದಿನ ಪ್ರಧಾನಿ ಮನಮೋಹನ್‌ಸಿಂಗ್ ಸಹಿ ಹಾಕಿರಲಿಲ್ಲ. ಮೋದಿ ಸಹಿ ಹಾಕಲು ಮುಂದಾದಾಗ ರೈತರು, ವಿಪಕ್ಷಗಳು ಪ್ರತಿಭಟನೆ ನಡೆಸಿವೆ. ಒತ್ತಡಕ್ಕೆ ಮಣಿದು ಪ್ರಧಾನಿ ಒಪ್ಪಂದದಿಂದ ಹಿಂದೆ ಸರಿದಿರುವುದು ಸ್ವಾಗತಾರ್ಹ ಎಂದರು.

ದೇಶದ ಆರ್ಥಿಕ ಹಿಂಜರಿತಕ್ಕೆ ಮೋದಿ ಅವರ ತಪ್ಪು ಆರ್ಥಿಕ ನೀತಿಗಳು, ಅವೈಜ್ಞಾನಿಕ ಜಿಎಸ್‌ಟಿ ಮತ್ತು ನೋಟು ಅಮಾನೀಕರಣ ನಿರ್ಧಾರವೇ ಕಾರಣ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments