“ನಾವು ಆಪರೇಷನ್ ಹಸ್ತ ಮಾಡಲ್ಲ, ಆದರೆ ಬಿಜೆಪಿ ಬಿಟ್ಟು ಬರುವವರನ್ನು ತಡೆಯಲಿ” : ಸಿದ್ದು ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ನ.12-ನಾವು ಆಪರೇಷನ್ ಹಸ್ತ ಮಾಡುವುದಿಲ್ಲ. ಅನೈತಿಕ ರಾಜಕೀಯ ಮಾಡುವುದು ಬಿಜೆಪಿಯವರ ಕೆಲಸ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾವುದೇ ಆಪರೇಷನ್ ಹಸ್ತ ಮಾಡುವುದಿಲ್ಲ. ಕಾಂಗ್ರೆಸ್ ಸಿದ್ಧಾಂತಗಳನ್ನು ಒಪ್ಪಿ ಬರುವವರನ್ನು ಸ್ವಾಗತಿಸುತ್ತೇವೆ.

ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಅವರು ಕಾಂಗ್ರೆಸ್‍ಗೆ ಸೇರುವುದಾಗಿ ಹೇಳಿದ್ದರು. ಇದಕ್ಕೆ ಅವರು ಪಕ್ಷದ ಸಿದ್ಧಾಂತ ಒಪ್ಪಿಕೊಳ್ಳಬೇಕು, ನಮ್ಮ ಹೈಕಮಾಂಡ್ ಒಪ್ಪಬೇಕು ಎಂದು ಅವರಿಗೆ ತಿಳಿಸಿದ್ದೇನೆ ಎಂದರು. ಆಪರೇಷನ್ ಕಮಲ ಮುಂದುವರೆಯಲಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ ಎಂಬ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರ ಬಳಿ ದುಡ್ಡಿದೆ.

ಅನೈತಿಕ ರಾಜಕಾರಣ ಮಾಡುವುದೇ ಅವರ ಕೆಲಸವಾಗಿದೆ. ದುಡ್ಡು ಕೊಟ್ಟು ಶಾಸಕರನ್ನು ಖರೀದಿ ಮಾಡುತ್ತಾರೆ. ಆಪರೇಷನ್ ಕಮಲ ಆರಂಭವಾಗಿದ್ದೇ ಬಿ.ಎಸ್.ಯಡಿಯೂರಪ್ಪ ಅವರಿಂದ. ನಾವು ಆ ಕೆಲಸ ಮಾಡುವುದಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಮೊದಲು ಅವರು ಬಿಜೆಪಿ ಬಿಟ್ಟು ಬರುವವರನ್ನು ತಡೆಯಲಿ ಎಂದು ಸವಾಲು ಹಾಕಿದರು.

ರಾಜು ಕಾಗೆ ನನ್ನೊಂದಿಗೆ ಮಾತನಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿರುವುದು ಗೊತ್ತಿಲ್ಲ. ಕಾಂಗ್ರೆಸ್ ಸಿದ್ದಾಂತ ಒಪ್ಪಿ ಸೇರುವುದಾದರೆ ಅಧ್ಯಕ್ಷರೊಂದಿಗೆ ಮಾತನಾಡಲು ಸೂಚಿಸಿದ್ದೇನೆ. ಅಶೋಕ್ ಪೂಜಾರಿ ಅವರು ಈ ಹಿಂದೆ ಜನತಾದಳದಲ್ಲಿದ್ದವರು. ನಾನು ಆ ಪಕ್ಷದಲ್ಲಿದ್ದಾಗ ಅವರಿಗೆ ಬಿ ಫಾರಂ ಕೊಟ್ಟಿದ್ದೆ. ಪಕ್ಷದ ಸಿದ್ಧಾಂತ ಒಪ್ಪಿ ಬರುವುದಾದರೆ ಸ್ವಾಗತ. ನಾವು ಯಾವುದೇ ಆಪರೇಷನ್ ಮಾಡುವುದಿಲ್ಲ ಎಂದು ಪುನರುಚ್ಚರಿಸಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುತ್ತೆ ಎಂದು ಹೇಳಿಲ್ಲ. 12ರಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ ಜೊತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿರುವ ಶಂಕೆ ಇದೆ ಎಂದು ಅವರು ತಿಳಿಸಿದರು. ಸಮ್ಮಿಶ್ರ ಸರ್ಕಾರ ರಚಿಸುವಾಗ ಖರ್ಗೆಗೆ ಸಿಎಂ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿರಲಿಲ್ಲ ಹಾಗೂ ನೀವೂ ಒಪ್ಪಿಲ್ಲ ಎಂದು ದೇವೇಗೌಡರು ಕಲಬುರಗಿಯಲ್ಲಿ ಹೇಳಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಇದು ಸುಳ್ಳು.

ಹೈಕಮಾಂಡ್ ನನ್ನನ್ನು ಕೇಳಲೇ ಇಲ್ಲ. ದೇವೇಗೌಡರು ಏಕೆ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರದ ಒಪ್ಪಂದ ಮಾಡುವಾಗ ನಾನು ಆ ಸಭೆಯಲ್ಲಿಯೇ ಇರಲಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು. ಜೆಡಿಎಸ್ ಜೊತೆ ಸರ್ಕಾರ ರಚನೆಗೆ ಮುಂದಾಗಬೇಕೆಂದು ಹೈಕಮಾಂಡ್ ಸೂಚನೆ ನೀಡಿತ್ತು. ಅದಕ್ಕೆ ನಾನು ಒಪ್ಪಿದೆ ಎಂದು ತಿಳಿಸಿದರು.

ಉಪಚುನಾವಣೆ ವಿಚಾರದಲ್ಲಿ ಊಹಾಪೋಹ, ಜರ್ನಲಿಸಂ ಹೆಚ್ಚಾಗಿದೆ.ಕಾಂಗ್ರೆಸ್ ಸಭೆಯಲ್ಲಿ ಯಾವುದೇ ವಾದ-ವಿವಾದಗಳು ನಡೆದಿಲ್ಲ. ಯಾವುದೇ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿಲ್ಲ. ಎಲ್ಲರೂ ಒಟ್ಟಾಗಿಯೇ ಸಭೆ ನಡೆಸಿದ್ದೇವೆ. ಸಭೆಯಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎಂದು ಹೇಳಿದರು.

15 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಬಾಕಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಇನ್ನು ಕೆಲವರ ಅಭಿಪ್ರಾಯ ಪಡೆದು ಹೈಕಮಾಂಡ್ ಜೊತೆ ಚರ್ಚಿಸಿ ಅಭ್ಯರ್ಥಿಗಳ ಆಯ್ಕೆ ಅಖೈರುಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಕೈ ಜೋಡಿಸುವ ಕುರಿತು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದೆ ಎಂದು ಅವರು ಹೇಳಿದರು.

Facebook Comments