ಸುಪ್ರೀಂ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.13- ಶಾಸಕರ ಅನರ್ಹತೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಅನರ್ಹ ಶಾಸಕರನ್ನು ಉಪಚುನಾವಣೆಗಳಲ್ಲಿ ಜನ ಸೋಲಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತೀರ್ಪಿನ ಬಳಿಕ ಸರ್ಕಾರಿ ಬಂಗಲೆಯಾದ ಕಾವೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಿನ ಸ್ಪೀಕರ್ ರಮೇಶ್‍ಕುಮಾರ್ ಅವರ ತೀರ್ಪಿನ್ನು ಸುಪ್ರೀಂಕೋರ್ಟ್ ಭಾಗಶಃ ಎತ್ತಿಹಿಡಿದಿದೆ.ಮೊದಲನೆ ಭಾಗದಲ್ಲಿ ರಮೇಶ್‍ಕುಮಾರ್ ಅವರು 17 ಮಂದಿ ಶಾಸಕರನ್ನು ಅನರ್ಹಗೊಳಿಸಿದ್ದರು. ಇದನ್ನು ನ್ಯಾಯಾಲಯ ಎತ್ತಿಹಿಡಿದೆ.

ಪ್ರಜಾಪ್ರಭುತ್ವದಲ್ಲಿ ಪಕ್ಷಾಂತರ ಸರಿಯಾದ ಕ್ರಮ ಅಲ್ಲ ಎಂದು ಹೇಳಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಒಂದು ರೀತಿ, ವಿರೋಧ ಪಕ್ಷದಲ್ಲಿದ್ದಾಗ ಮತ್ತೊಂದು ರೀತಿಯಲ್ಲಿ ವರ್ತಿಸುವುದನ್ನು ನ್ಯಾಯಾಲಯ ಆಕ್ಷೇಪಿಸಿದೆ ಎಂದರು.ಪಕ್ಷದ ಚಿನ್ಹೆಯಡಿ ಗೆದ್ದವರು ಮನೋಸೋಇಚ್ಚೆ ವರ್ತಿಸುವಂತಿಲ್ಲ ಎಂದು ತೀರ್ಪಿನಲ್ಲಿ ಎಚ್ಚರಿಕೆ ನೀಡಲಾಗಿದೆ.

ರಾಜೀನಾಮೆಯ ಸಾಚಾತನ ಮತ್ತು ವಾಸ್ತವತೆಯನ್ನು ಗಮನಿಸಿ ಅಂಗೀರಿಸುವ ಅಥವಾ ನಿರಾಕರಿಸುವ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸಂವಿಧಾನದಲ್ಲಿರುವ ನಿಯಾಮವಳಿಗಳನ್ನು ಉಲ್ಲೇಖಿಸಿ ಸ್ಪೀಕರ್ ರಮೇಶ್‍ಕುಮಾರ್ ಅವರು ನೀಡಿದ್ದ ತೀರ್ಪನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಇದು ಶಾಸಕರ ಅನರ್ಹತೆಗೆ ದೂರು ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮತ್ತು ನನ್ನ ನಿಲುವಿಗೆ ಸಂದ ಜಯ. ತೀರ್ಪಿನಿಂದ ನಮಗೆ ಹಿನ್ನಡೆಯಾಗಿದೆ ಎಂಬ ಅಭಿಪ್ರಾಯ ಸರಿಯಲ್ಲ ಎಂದರು.

ಇನ್ನು ರಮೇಶ್‍ಕುಮಾರ್ ಅವರ ಆದೇಶದಲ್ಲಿ ಎರಡನೇ ಭಾಗವಾಗಿ ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ ಎಂದು ಸೂಚಿಸಲಾಗಿತ್ತು. ಅದನ್ನು ಪರಿಷ್ಕರಣೆ ಮಾಡಿರುವ ನ್ಯಾಯಾಲಯ ಅನರ್ಹರಿಗೆ ಸ್ಪರ್ಧೆ ಮಾಡುವ ಅವಕಾಶ ನೀಡಿದೆ. ಇದನ್ನು ಕೂಡ ನಾನು ಸ್ವಾಗತಿಸುತ್ತೇನೆ. ರಾಜಕಾರಣದಲ್ಲಿ ನೈತಿಕತೆ ಮುಖ್ಯ ಎಂದರು.

ಸುಪ್ರೀಂಕೋರ್ಟ್ ಶಾಸಕರ ಪಕ್ಷಾಂತರವನ್ನು ಒಪ್ಪಿಕೊಂಡಿಲ್ಲ. ಅನರ್ಹತೆಯನ್ನು ಎತ್ತಿ ಹಿಡಿದಿರುವ ಜತೆಗೆ ನೈತಿಕತೆ ಬಗ್ಗೆ ಚರ್ಚೆ ಮಾಡಿದೆ. ಜನ ಉಪ ಚುನಾವಣೆಗಳಲ್ಲಿ ಅನರ್ಹರನ್ನು ಸೋಲಿಸುತ್ತಾರೆ. ಈ ಹಿಂದೆ ಮಹಾರಾಷ್ಟ್ರ, ಗುಜರಾತ್ ಚುನಾವಣೆಯಲ್ಲಿ ಪಕ್ಷಾಂತರ ಮಾಡಿದ ಶಾಸಕರನ್ನು ಜನ ಸೋಲಿಸಿದ್ದಾರೆ. ಕರ್ನಾಟಕದಲ್ಲಿ ಅದೇ ರೀತಿ ಅನರ್ಹರು ಚುನಾವಣೆಯಲ್ಲಿ ಸೋಲುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.

ತೀರ್ಪನ್ನು ನಾವು ಸಂಪೂರ್ಣವಾಗಿ ಸ್ವಾಗತಿಸುತ್ತೇವೆ. ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ. ಆದರೂ ಕಾನೂನು ತಜ್ಞರು ಮತ್ತು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. ಪಕ್ಷಾಂತರ ನಿಷೇಧ ಕಾಯ್ದೆಯ ಷೆಡ್ಯೂಲ್ 10 ಇನ್ನಷ್ಟು ಬಲಗೊಳ್ಳಬೇಕು. ಪಕ್ಷಾಂತರ ಮಾಡುವ ಶಾಸಕರಿಗೆ ಇದು ತಕ್ಕ ಪಾಠವಾಗಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ದಾಡಿ ಬಿಡಲಿರುವ ಸಿದ್ದರಾಮಯ್ಯ:
ಇತ್ತೀಚೆಗೆ ದಾಡಿ ಬಿಟ್ಟಿರುವ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, 1974ರಿಂದಲೂ ನಾನು ಗಡ್ಡ ಬಿಟ್ಟಿದೆ. ಮುಖ್ಯಮಂತ್ರಿ ಆದ ಮೇಲೆ ಬಿಳಿ ಕೂದಲು ಬಂದಿದ್ದರಿಂದಾಗಿ ಅದನ್ನು ತೆಗೆದಿದ್ದೆ. ಈಗ ಮತ್ತೆ ಗಡ್ಡ ಬಿಡಬೇಕು ಎನ್ನಿಸಿದೆ ಹಾಗಾಗಿ ಬಿಟ್ಟಿದ್ದೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಜಮೀರ್‍ಅಹಮ್ಮದ್ ಖಾನ್, ಎಚ್.ಎಂ.ರೇವಣ್ಣ, ಬಸವರಾಜ ರಾಯರೆಡ್ಡಿ, ಶಾಸಕರಾದ ಅಮರೇಗೌಡ ಬಯ್ಯಾಪುರಾ, ಶರಣಪ್ಪ ದರ್ಶನಾಪುರ್, ಪಿ.ಟಿ.ಪರಮೇಶ್ವರ್ ನಾಯಕ್, ಬೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್, ಮಾಜಿ ಶಾಸಕ ಶಿವರಾಜ್ ತಂಗಡಗಿ ಸೇರಿದಂತೆ ಮತ್ತಿತರರಿದ್ದರು.

Facebook Comments