ಅನರ್ಹರೆಲ್ಲ ತ್ಯಾಗಿಗಳಲ್ಲ,ಸ್ವಾರ್ಥಿಗಳು : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ನ.16-ಅನರ್ಹರೆಲ್ಲ ತ್ಯಾಗಿಗಳಲ್ಲ. ಇವರೆಲ್ಲ ಸ್ವಾರ್ಥಿಗಳು. ಇವರೇನು ಸ್ವಾತಂತ್ರ್ಯ ಹೋರಾಟ ಮಾಡಿದ್ದಾರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಗುಡುಗಿದರು. ತಮ್ಮನ್ನುಭೇಟಿ ಮಾಡಿದ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, ಏನೇ ಕಥೆ ಹೇಳಿದರೂ ಅವರು ಅನರ್ಹತೆ ಪಟ್ಟಿಯಲ್ಲೇ ಹೋಗಬೇಕು. ಅವರಿಗಂಟಿರುವ ಅನರ್ಹತೆಯ ಪಟ್ಟಿ ಹೋಗೊಲ್ಲ ಎಂದರು.

ಆಪರೇಷನ್ ಕಮಲದ ಒಂದೊಂದೇ ರಹಸ್ಯ ಬಯಲಾಗುತ್ತಿದೆ.ಕೋರ್ಟ್ ತೀರ್ಪಿನ ನಂತರ ಅನರ್ಹ ಶಾಸಕರೇ ಬಾಯ್ಬಿಡುತ್ತಿದ್ದಾರೆ. ರಮೇಶ್ ಜಾರಕಿಹೊಳಿಯಂಥವರ ಮಾತಿಗೆ ಕಿಮ್ಮಿತ್ತಿಲ್ಲ. ಅವರು ಅನರ್ಹರಾಗಿರುವ ಕಾರಣ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.  ಉಪಚುನಾವಣೆಯಲ್ಲಿ ಬಿಜೆಪಿ ಎಂಟು ಸ್ಥಾನವನ್ನೂ ಗೆಲ್ಲುವುದಿಲ್ಲ. ಚುನಾವಣೆ ನಂತರ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ ಎಂದರು.

ಬಿಜೆಪಿ ಉಪಚುನಾವಣೆಗಾಗಿ ಅಕ್ರಮ ಮಾಡಲು ಮುಂದಾಗಿದ್ದಾರೆ ಎಂಬುದಕ್ಕೆ ನಿನ್ನೆ ಯೋಗೇಶ್ವರ್ ಫೋಟೊವಿರುವ ಸೀರೆಗಳು ಸಿಕ್ಕಿರುವುದೇ ಸಾಕ್ಷಿಯಾಗಿದೆ. ಇದೆಲ್ಲ ಚುನಾವಣಾ ಅಕ್ರಮವನ್ನು ಎತ್ತಿ ತೋರಿಸುತ್ತಿಲ್ಲವೇ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನರ್ಹರನ್ನು ಸಚಿವರನ್ನಾಗಿ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವೇ? ಎಂದು ಪ್ರಶ್ನಿಸಿದರು.

ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ಸ್ಟ್ಯಾಂಡೇ ಇಲ್ಲ. ಈ ಚುನಾವಣೆಯಷ್ಟೇ ಅಲ್ಲ ಯಾವುದೇ ಚುನಾವಣೆಯಲ್ಲೂ ಅವರಿಗೆ ಸ್ಟ್ಯಾಂಡೇ ಇರೋಲ್ಲ. ಅವರ ಸ್ಟ್ಯಾಂಡ್‍ನಿಂದ ಬಿಜೆಪಿಗೆ ಏನು ಲಾಭವಾಗುತ್ತೆ ಎಂದು ಮಾರ್ಮಿಕವಾಗಿ ನುಡಿದರು.

Facebook Comments